ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆ ಮುಂದೆ ಕುಳಿತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ರಾಜಾಜಿನಗರದ ಮಂಜುನಾಥ ನಗರದಲ್ಲಿ ನಡೆಯಿತು. ಮಂಜುನಾಥ್ (40) ಎಂಬವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಭಾನುವಾರ ರಜೆ ಇದ್ದುದರಿಂದ ಮನೆಯಲ್ಲಿದ್ದರು. ಸಂಜೆ ಮನೆ ಹೊರಗಡೆಯಿರುವ ಮರದ ಕೆಳಗೆ ಕುಳಿತು ಮೊಬೈಲ್ ನೋಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ.
ಮಂಜುನಾಥ್ ಅವರ ಕಾಲಿನ ಪಾದಗಳು ಭಾಗಶಃ ತುಂಡಾಗಿವೆ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳೀಯ ನಿವಾಸಿಯಾಗಿರುವ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.