ಹೊಸದಿಗಂತ ವರದಿ, ಮಡಿಕೇರಿ
ಸೌರಮಾನ ಪಂಚಾಂಗದ ಪ್ರಕಾರ ಕೊಡವ ಬುಡಕಟ್ಟು ಲೋಕದ ಹೊಸ ವರ್ಷ ಎಡಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಹೊನ್ನಾರು ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಗ್ರಾಮದ ಕೂಪದಿರ ಕುಟುಂಬದ ಭತ್ತದ ಗದ್ದೆಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜೋಡೆತ್ತಿನ ಮೂಲಕ ಸಕಲ ವಿಧಿ ವಿಧಾನಗಳೊಂದಿಗೆ ಉಳುಮೆ (ಹೊನ್ನಾರು) ಕಾರ್ಯ ಮಾಡಿದರು.
ಮೊದಲಿಗೆ ಮನೆಯ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರಿಗೆ ಹಾಗೂ ಕಾವೇರಿ ಮಾತೆಗೆ ಶ್ರದ್ಧಾಭಕ್ತಿಯ ನಮನ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದು ಭತ್ತದ ಗದ್ದೆಗೆ ತೆರಳಿದರು. ಭೂತಾಯಿಗೂ, ಸೂರ್ಯ ದೇವನಿಗೂ ಮತ್ತು ಜೋಡೆತ್ತುಗಳಿಗೂ ನಮನ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಉಳುಮೆ ಕಾರ್ಯ ನಡೆಸಿದರು.
ಸೌರಮಾನ ಪಂಚಾಂಗದಂತೆ ಹೊಸ ವರ್ಷ ಎಡಮ್ಯಾರ್ 1ನ್ನು ಸಿ.ಎನ್.ಸಿ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸುತ್ತಾ ಬಂದಿದೆ. ಇದರ ಮಹತ್ವ ಮತ್ತು ಸಾಂಸ್ಕೃತಿಕ ಸೊಗಡನ್ನು ಸಾರ್ವತ್ರಿಕವಾಗಿಸಿ ಜನಮಾನ್ಯಗೊಳಿಸಿದ ಕೀರ್ತಿ ಸಿಎನ್‍ಸಿ ಗೆ ಸಲ್ಲುತ್ತದೆ ಎಂದು ನಾಚಪ್ಪ ತಿಳಿಸಿದರು.
ಕೊಡವರು ಮೂಲ ವಂಶಸ್ಥ (ರೇಸ್) ಬುಡಕಟ್ಟು ಜನಾಂಗವಾಗಿದ್ದು ಕೃಷಿ ಮತ್ತು ಪಶುಪಾಲನೆ ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಭೂಮಿ ತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧದ ದ್ಯೋತಕವಾಗಿ ಪ್ರತೀ ವರ್ಷ ಎಡಮ್ಯಾರ್ 1 ರಂದು ಸಿ.ಎನ್.ಸಿ ಸಂಘಟನೆ ಭತ್ತದ ಗದ್ದೆಯಲ್ಲಿ ಜೋಡೆತ್ತಿನ ಮೂಲಕ ಸಾಂಪ್ರದಾಯಿಕ ಉಳುಮೆ ಕಾರ್ಯವನ್ನು ನಡೆಸುತ್ತಾ ಬಂದಿದೆ ಎಂದರು.
ರಾಜ್ಯಾಂಗದತ್ತ ಹಕ್ಕೋತ್ತಾಯಗಳಾದ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಕೊಡವ ರೇಸ್ ನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು, “ಕೊಡವರ ಧಾರ್ಮಿಕ ಸಂಸ್ಕಾರವಾದ ಕೋವಿ / ತೋಕ್”ಗೆ ಸಂವಿಧಾನದ 25, 26ನೇ ವಿಧಿಯಂತೆ ಸಿಖ್ಖರ ಕಿರ್‍ಪಾಣದ ಮಾದರಿಯಲ್ಲಿ ರಾಜ್ಯಾಂಗ ಭದ್ರತೆ ಸಿಗಬೇಕು ಮತ್ತು ಕೊಡವ ತಕ್ಕ್‍ನ್ನು ಸಂವಿಧಾನದ 8ನೇ ಶೇಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕೆಂದು ಇದೇ ಸಂದರ್ಭ ಹಕ್ಕೊತ್ತಾಯ ಮಂಡಿಸಿದರು.
ಕೂಪದಿರ ಪುಷ್ಪಾ ಮುತ್ತಪ್ಪ, ಲೆಪ್ಟಿನೆಂಟ್(ನಿವೃತ್ತ) ಕರ್ನಲ್ ಪಾರ್ವತಿ, ಕೂಪದಿರ ಕಾಂತಿ ಬೆಳ್ಯಪ್ಪ, ಕೂಪದೀರ ನಿಶ್ಮಿತಾ ಬೆಳ್ಯಪ್ಪ, ಚೋಕಂಡ ಶೀಲಾ ಬೋಪಣ್ಣ, ಚೋಕಂಡ ರಾಧಾ ಚಂಗಪ್ಪ, ಓಡಿಯಂಡ ನೈಲಾ ಮೇದಪ್ಪ, ಕೂಪದಿರ ಜಾಜಿ ಕಾಳಪ್ಪ, ಕುಲ್ಲಚಂಡ ಉಷಾ ಹರ್ಷ, ಕೂಪದಿರ ರೇಖಾ ಕಾಳಪ್ಪ, ಕುಲ್ಲಚಂಡ ಶಾರದಾ ಮಂದಪ್ಪ, ಕೂಪದಿರ ಕೃಷ್ಮಾ ತಿಮ್ಮಯ್ಯ, ಚೋಕಂಡ ಚವಿಷ್ಕಾ ಬೋಪಣ್ಣ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಕೂಪದಿರ ಮುತ್ತಪ್ಪ, ಕೂಪದಿರ ಸಾಬು, ಕೂಪದಿರ ಬೆಳ್ಯಪ್ಪ, ಕೂಪದಿರ ನಿತೀಶ್ ಬೆಳ್ಯಪ್ಪ, ಕೂಪದಿರ ಮನು ದೇವಯ್ಯ, ಕೂಪದಿರ ರಾಬಿನ್ ಪೊನ್ನಪ್ಪ, ಕೂಪದಿರ ಪ್ರಣಾಮ್, ಕುಲ್ಲಚಂಡ ಮಂದಣ್ಣ, ಕುಲ್ಲಚಂಡ ಹರ್ಷ ಪಾಲ್ಗೊಂಡಿದ್ದರು.
ಅಂಬೇಡ್ಕರ್ ಜಯಂತಿ ಆಚರಣೆ: ಇದೇ ಸಂದರ್ಭ ಸಿಎನ್‍ಸಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ನ್ಯಾಯಸಮ್ಮತವಾದ ಕೊಡವ ಆಕಾಂಕ್ಷೆಗಳನ್ನು ಸಾಧಿಸಲು ಸಂವಿಧಾನವು ಏಕೈಕ ರಾಮಬಾಣವಾಗಿದೆ ಎಂದು ನಾಚಪ್ಪ ಪ್ರತಿಪಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ಸಮಾಜವನ್ನು ವಿಭಿನ್ನ ಹೂಗುಚ್ಛ ಎಂದು ಪರಿಗಣಿಸಿದ್ದಾರೆ ಮತ್ತು ಅದನ್ನು ಸಾಂವಿಧಾನಿಕ ಆರೈಕೆಯ ಮೂಲಕ ಅರಳಿಸಬೇಕಾಗಿದೆ ಎಂದು ಪ್ರತಿಪಾದಿಸಿದ್ದರು. ಅದು ಕರಗುವ ಪಾತ್ರೆಯಾಗಿರಬಾರದೆಂದು ಬಯಸಿದ್ದರು ಎಂದ ನಾಚಪ್ಪ, ಕೊಡವ ಬುಡಕಟ್ಟು ಜನರು ತಮ್ಮ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಸಂವಿಧಾನದ ಬೆಂಬಲದ ಮೂಲಕವೇ ಪಡೆಯಬೇಕಾಗಿದೆ ಎಂದರು.
ಕೊಡವರ ಹಕ್ಕುಗಳಿಗಾಗಿ ರಾಜಕೀಯ, ಸಂವಿಧಾನತ್ಮಕ ಮತ್ತು ಕಾನೂನಾತ್ಮಕ ಆಂದೋಲನಕ್ಕೆ ಸಜ್ಜಾಗಲು ಸಭೆ ನಿರ್ಧರಿಸಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ