Wednesday, January 7, 2026

ಸಣ್ಣ ಜಗಳಕ್ಕೆ ಪ್ರಾಣವೇ ಹೋಯ್ತು: ಕೊರಿಯನ್ ಗೆಳೆಯನಿಗೆ ಚಾಕು ಇರಿದ ಮಣಿಪುರದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಷುಲ್ಲಕ ವಿಚಾರದಿಂದ ಆರಂಭವಾದ ವಾಗ್ವಾದವೊಂದು ಭೀಕರ ಅಂತ್ಯ ಕಂಡ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮಣಿಪುರ ಮೂಲದ ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ನಡೆದ ಜಗಳದ ವೇಳೆ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಮೃತ ಯುವಕ ದಕ್ಷಿಣ ಕೊರಿಯಾದ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತನನ್ನು ಡಕ್ ಹೀ ಯುಹ್ ಎಂದು ಗುರುತಿಸಲಾಗಿದೆ. ಇಬ್ಬರೂ ಗ್ರೇಟರ್ ನೋಯ್ಡಾದ ಬಹುಮಹಡಿ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಡಕ್ ಹೀ ಖಾಸಗಿ ಮೊಬೈಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಇಬ್ಬರೂ ಮದ್ಯ ಸೇವಿಸಿದ್ದ ಸಂದರ್ಭದಲ್ಲಿ ವಾಗ್ವಾದ ತೀವ್ರಗೊಂಡಿದ್ದು, ಆ ಕ್ಷಣದಲ್ಲಿ ಯುವತಿ ಚಾಕುವಿನಿಂದ ಆತನ ಎದೆಗೆ ಇರಿದಿದ್ದಾಳೆ ಎನ್ನಲಾಗಿದೆ.

ಗಾಯಗೊಂಡ ತಕ್ಷಣವೇ ಆರೋಪಿತ ಯುವತಿ ಡಕ್ ಹೀ ಯುಹ್ ನನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: FOOD | ಸೂಪರ್‌ ಸ್ಪೈಸಿ & ಟೇಸ್ಟಿ ಟೊಮ್ಯಾಟೊ-ಕಾಯಿ ಚಟ್ನಿ, ಅನ್ನ-ರೊಟ್ಟಿಗೆ ಸಖತ್‌ ಕಾಂಬಿನೇಷನ್‌

ಆರೋಪಿತೆಯನ್ನು ಲುಂಜೀನಾ ಪಮೈ ಎಂದು ಗುರುತಿಸಲಾಗಿದ್ದು, ವಿಚಾರಣೆ ವೇಳೆ ಆಕೆ ಹಲವು ಮಾಹಿತಿ ನೀಡಿದ್ದಾಳೆ. ಡಕ್ ಹೀ ಮದ್ಯ ಸೇವಿಸಿದ ಬಳಿಕ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆಕ್ರೋಶದ ಕ್ಷಣದಲ್ಲಿ ತಪ್ಪಾಗಿ ಈ ಘಟನೆ ನಡೆದಿದೆ, ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂಬುದನ್ನೂ ಆಕೆ ಒಪ್ಪಿಕೊಂಡಿದ್ದಾಳೆ.

ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಇರಿತದ ಗಾಯಗಳ ಸಂಖ್ಯೆ ಹಾಗೂ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!