ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಗಿಂತ ಕರುಣಾಮಯಿ ಮತ್ತೊಬ್ಬರಿಲ್ಲ ಅಂತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಮಕ್ಕಳ ಮೇಲಿನ ಕೋಪ ಅತಿರೇಕಕ್ಕೆ ಹೋಗಿ ಮತ್ತೇನೋ ಆಗುತ್ತದೆ. ಕೆಲವು ತಾಯಂದಿರು ತಮ್ಮ ಮಕ್ಕಳ ಮೇಲೆ ದೈಹಿಕ ಹಲ್ಲೆಯನ್ನೂ ಮಾಡುತ್ತಾರೆ. ಕ್ಷಣಾರ್ಧದಲ್ಲಿ ಮಾಡಿದ ಕೃತ್ಯಗಳಿಂದ ಮಕ್ಕಳು ಪ್ರಾಣ ಕಳೆದುಕೊಂಡ ಪ್ರಕರಣಗಳಿವೆ. ಇಂತಹದ್ದೇ ಘಟನೆಯೊಂದು ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಚಿಕ್ಕ ಮಕ್ಕಳ ಮೇಲೆ ಕೊತ ಕೊತ ಕುದಿಯುವ ನೀರು ಸುರಿದು ರಾಕ್ಷಸ ವರ್ತನೆ ತೋರಿದ್ದಾಳೆ.
ಮೇದಕ್ ಜಿಲ್ಲೆಯ ವೆಲ್ದುರ್ತಿ ಮಂಡಲದ ಎರ್ಟಕಪಲ್ಲಿಯಲ್ಲಿ ಎಷ್ಟು ಹೊತ್ತಾದರೂ ಎದ್ದೇಳದಿದ್ದಕ್ಕೆ ಮಕ್ಕಳ ಮೇಲೆ ಕೋಪಗೊಂಡು ಅವರ ಮೇಲೆ ಬಿಸಿ ಬಿಸಿ ನೀರನ್ನು ಸುರಿದಿದ್ದಾಳೆ. ಮಲಗಿದ್ದ ಮಕ್ಕಳು ಬಿಸಿ ನೀರಿನ ತಾಪಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳು ಅಳುತ್ತಿರುವುದನ್ನು ಕಂಡು ಅಲ್ಲಿದ್ದ ಸ್ಥಳೀಯರು ಓಡಿಬಂದರು. ವಿಷಯ ತಿಳಿದು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ವಿರುದ್ಧ ತಾಯಿಯ ಅಮಾನವೀಯ ವರ್ತನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.