Saturday, September 23, 2023

Latest Posts

ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಡ್ಯಾನ್ಸ್ ಮಾಡಿದ ಮುಸ್ಲಿಂ ವರ: ವ್ಯಾಪಕ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಅಗರಿಯಲ್ಲಿರುವ ವಧುವಿನ ಮನೆಗೆ ವರ ತುಳುನಾಡಿನ ಕೊರಗಜ್ಜ ದೈವವನ್ನು ಹೋಲುವ ರೀತಿಯ ವೇಷ ಭೂಷಣದಲ್ಲಿ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದು, ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಅಗರ್ತಿಮೂಲ ಉಮರುಲ್ ಭಾಷಿತ್ ಸೇರಿ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಕೊಳ್ನಾಡು ಗ್ರಾಮದ ಅಬ್ದುಲ್ ಅಝೀಝ್ ಅವರ ಪುತ್ರಿ ಮದುವೆ ದಿನ ಈ ಘಟನೆ ನಡೆದಿದೆ.
ಮದುವೆ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ಸ್ನೇಹಿತರ ಜೆತೆಗೆ ವಧುವಿನ ಮನೆಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜ ದೈವವನ್ನು ಹೋಲುವ ವೇಷ ಭೂಷಣ ಧರಿಸಿದ ದೃಶ್ಯವನ್ನು ವರನ ಕಡೆಯವರೇ ಸೆರೆ ಹಿಡಿದ ವಿಡಿಯೋ ವೈರಲ್ ಆಗಿತ್ತು.
ಹಿಂದು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಚೇತನ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ದೂರುಗಳ ಮೇಲೆ ದೂರು:
ವಿಶ್ವ ಹಿಂದೂ ಪರಿಷತ್ತ್ ಭಜರಂಗದಳ, ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಭಾರತೀಯ ಜನತಾ ಪಾರ್ಟಿ ಕೊಳ್ನಾಡು ಮಹಾಶಕ್ತಿ ಕೇಂದ್ರ, ಬಿ.ಜೆ.ಪಿ. ಎಸ್. ಸಿ. ಮೋರ್ಚಾ ಬಂಟ್ವಾಳ ಮಂಡಲ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮಾನಭ ಕಟ್ಟೆ ಅವರಿಂದ ದೂರುಗಳು ದಾಖಲಿಸಲಾಗಿದೆ.
ವಧುವಿನ ಮನೆಗೆ ಮುತ್ತಿಗೆ:
ಘಟನೆಯನ್ನು ಖಂಡಿಸಿದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸಾಲೆತ್ತೂರಿನಲ್ಲಿರುವ ಮನೆಗೆ ಮುತ್ತಿಗೆ ಹಾಕಲು ಮುಂದಾದರು. ಘೋಷಣೆ ಕೂಗುತ್ತಾ ಮನೆಯತ್ತ ಧಾವಿಸುತ್ತಿದ್ದಂತೆ ವಿಟ್ಲ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಫ್‌ಐ ವಿಟ್ಲ ಡಿವಿಷನ್ ಖಂಡನೆ:
ಇದು ಇಸ್ಲಾಮಿನ ಚೌಕಟ್ಟನ್ನು ಮೀರಿದ್ದು ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಆಯಾ ಜಮಾತಿನ ಸಮಿತಿಗಳು ಮುನ್ನಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಹಾಗೆಯೇ ಈ ಘಟನೆಗೆ ಸಂಬಂದಿಸಿ ಸಂಘ ಪರಿವಾರದ ದುಷ್ಟ ಶಕ್ತಿಗಳು ಕೋಮುಭಾವನೆ ಕೆರಲಿಸುವ ಉದ್ದೇಶದಿಂದ ಮದುಮಗಳ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದನ್ನು ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಖಂಡಿಸುತ್ತದೆ. ಅದೇ ರೀತಿ ಸಂಘಪರಿವಾರವು ಇಂತಹ ಘಟನೆಗಳನ್ನು ಮರುಕಲಿಸಲು ಪ್ರಯತ್ನಿಸಿದ್ದಲ್ಲಿ ತಕ್ಕುದಾದ ಪ್ರತಿಕ್ರಿಯೆ ನೀಡಲು ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಸದಸ್ಯರು ಸಿದ್ದರಿದ್ದು, ಈ ಘಟನೆಗೆ ಸಂಬಂಧಿಸಿದ ಪೊಲೀಸ್ ಇಲಾಖೆ ಕಾನೂನು ಕ್ರಮವನ್ನು ತೆಗೆದು ಕೊಂಡು ಸಾಲೆತ್ತೂರಿನ ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಎಂದು ಪಿಎಫ್‌ಐ ವಿಟ್ಲ ಡಿವಿಜನ್ ಅಧ್ಯಕ್ಷ ಶಾಫಿ ಮಾಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!