ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಕುರಿತು ಉತ್ತರ ಪ್ರದೇಶದ ಸಂಶೋಧಕಿ ನಜ್ಮಾ ಪರ್ವೀನ್ ಪಿಎಚ್‌ಡಿ ಮಾಡಿದ್ದಾರೆ. ಈ ಮೂಲಕ ಮೋದಿ ಕುರಿತ ಪಿಎಚ್‌ಡಿ ಅಧ್ಯಯನ ಮಾಡಿದ ಮೊದಲ ಮುಸ್ಲಿಂ ಮಹಿಳೆ ಎಂದು ಹೇಳಲಾಗಿದೆ.
ಉತ್ತರಪ್ರದೇಶದ ವಾರಾಣಸಿಯ ಲಲ್ಲಾಪುರ ಎಂಬಲ್ಲಿನ ನಿವಾಸಿ ಆಗಿರುವ ನಜ್ಮಾ ಪರ್ವೀನ್, ‘ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯದ ಮೇಲೆ ಈಕೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿಯವರ ಬಗ್ಗೆ ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆ ಎನಿಸಿಕೊಂಡಿದ್ದಾರೆ ನಜ್ಮಾ ಪರ್ವೀನ್. ಇದರಲ್ಲಿ ಅವರು ಪ್ರಧಾನಿ ಮೋದಿಯನ್ನು ರಾಜಕೀಯದ ‘ಮೆಗಾಸ್ಟಾರ್’ ಎಂದು ಬಣ್ಣಿಸಿದ್ದಾರೆ.
ಪರ್ವೀನ್ 2014 ರಲ್ಲಿ ಸಂಶೋಧನೆಗೆ ಸೇರಿಕೊಂಡರು ಮತ್ತು BHU ನ ಪ್ರೊಫೆಸರ್ ಸಂಜಯ್ ಶ್ರೀವಾಸ್ತವ ಅವರ ಮೇಲ್ವಿಚಾರಣೆಯಲ್ಲಿ 8 ವರ್ಷಗಳಲ್ಲಿ ತನ್ನ ಪ್ರಾಜೆಕ್ಟ್ ಪೂರ್ಣಗೊಳಿಸಿದರು. ಆದರೆ ಅವರ ಪ್ರಬಂಧದ ಬಾಹ್ಯ ಪರೀಕ್ಷಕರು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಬಂದಿದ್ದರು.
ಸಂಶೋಧಕಿ ನ್ಜಾಮ ಪರ್ವೀನ್ ಸಾಮಾನ್ಯ ನೇಕಾರ ಕುಟುಂಬದಿಂದ ಬಂದವರು ಮತ್ತು ಹಲವಾರು ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರು. ಕಷ್ಟಗಳನ್ನು ಎದುರಿಸಿ, ವಿಶಾಲ ಭಾರತ ಸಂಸ್ಥಾನದ ಸಂಸ್ಥಾಪಕ ಪ್ರೊಫೆಸರ್ ರಾಜೀವ್ ಶ್ರೀವಾಸ್ತವ ಅವರ ಆರ್ಥಿಕ ಬೆಂಬಲದೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಇನ್ನು, ಮೋದಿಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದಕ್ಕೆ ಉತ್ತರಿಸಿದ ನಜ್ಮಾ ಪರ್ವೀನ್, ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿಯ ಮಾದರಿಯನ್ನು ರಚಿಸಿದ್ದರಿಂದ ನಾನು ಈ ವಿಷಯವನ್ನು ಆಯ್ಕೆ ಮಾಡಿದ್ದೇನೆ. ಬಳಿಕ, ಅವರ ಜನಪ್ರಿಯತೆ ಹೆಚ್ಚಾಯಿತು ಮತ್ತು ಅವರು ದೇಶದ ಪ್ರಧಾನಿಯಾದರು.ಅಲ್ಲದೆ, 2014 ರ ಸಾರ್ವತ್ರಿಕ ಚುನಾವಣೆಗಳು ದೇಶದ ಸಂಪೂರ್ಣ ರಾಜಕೀಯ ಭೂದೃಶ್ಯವನ್ನು ಪರಿವರ್ತಿಸಿದವು. ಭಾರತೀಯ ಜನತಾ ಪಕ್ಷದ ಗೆಲುವು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡಿತು. ಪ್ರಧಾನಿಯಾಗಿ ಮೋದಿ ಕ್ರಿಯಾತ್ಮಕ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ದೇಶದ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡರು. ಅದಕ್ಕಾಗಿಯೇ ನಾನು ಈ ವಿಷಯವನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ಹೇಳಿದರು.
ಕೆಲವರು ತನ್ನ ನಿರ್ಧಾರವನ್ನು ವಿರೋಧಿಸಿದರು. ಆದರೆ ನಾನು ನನ್ನ ಆಲೋಚನೆಯಲ್ಲಿ ದೃಢವಾಗಿದ್ದೆ, ಹಾಗೂ ಸಂಶೋಧನೆಗೆ ಮುಂದಾದೆ . ಅಲ್ಲದೆ, ಮೋದಿಯವರಂತೆ ರಾಜಕಾರಣಿಯಾಗುವ ಕನಸು ಹೊತ್ತಿರುವ ಪರ್ವೀನ್, ತಾನು ಈಗಾಗಲೇ ಅಧ್ಯಕ್ಷೆಯಾಗಿರುವ ಭಾರತೀಯ ಅವಾಮ್ ಪಕ್ಷ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇನೆ ಎಂದೂ ಹೇಳಿದ್ದಾರೆ.
ಮೋದಿ ಕುರಿತ ಪ್ರಬಂಧವನ್ನು ಐದು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ ಮತ್ತು ಪರ್ವೀನ್ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಲು 20 ಹಿಂದಿ ಪುಸ್ತಕಗಳು ಮತ್ತು ಪಿಎಂ ಮೋದಿ ಅವರ ಜೀವನಚರಿತ್ರೆ ಸೇರಿದಂತೆ 79 ಇಂಗ್ಲಿಷ್ ಪುಸ್ತಕಗಳನ್ನು ಉಲ್ಲೇಖಿಸಿದ್ದಾಗಿ ಹೇಳುತ್ತಾರೆ. ಅಲ್ಲದೆ, ಅವರು 37 ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಸಹೋದರ ಪಂಕಜ್ ಮತ್ತು ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಭೇಟಿಯಾದರು. ತ್ರಿವಳಿ ತಲಾಖ್ ವಿರುದ್ಧದ ಆಂದೋಲನ, ಕಾಶಿಯಿಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಗೆ ರಾಖಿಗಳನ್ನು ಕಳುಹಿಸುವುದು ಮತ್ತು ಮೋದಿಗೆ ಭಾರತೀಯ ಅವಾಮ್ ಪಕ್ಷದ ಬೆಂಬಲವನ್ನು ಸಂಶೋಧನೆಯಲ್ಲಿ ಪ್ರಮುಖವಾಗಿ ಸೇರಿಸಲಾಗಿದೆ ಎಂದು ಪರ್ವೀನ್ ಹೇಳಿದರು.