ಹೊಸದಿಗಂತ ವರದಿ, ಚಿಕ್ಕಮಗಳೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಹಲವು ಗಣ್ಯರು ಬುಧವಾರ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಮೂಡಿಗೆರೆ ತಾಲೂಕು ದಾರದ ಹಳ್ಳಿಯ ಚಂದ್ರೇಗೌಡರ ನಿವಾಸಕ್ಕೆ ಭೇಟಿ ನೀಡಿ ಮೃತರಿಗೆ ಗೌರವ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತನ ಹೇಳಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಚಂದ್ರೇಗೌಡ ಅವರು ಒಳ್ಳೆ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಅಂದು ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಷ್ಟ ಇತ್ತು ಎಂದು ಹೇಳಿದರು.
ಬಿಜೆಪಿ ಬೆಂಬಲ ಪಡೆದು ಆಗ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿ ಆಗಿದ್ದರು. ಚಂದ್ರೇಗೌಡರು ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು. ನಂತರ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು. ಮತ್ತೆ ಕಾಂಗ್ರೆಸ್ ಸೇರಿ ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದರು.
ಅವರು ರಾಜಕೀಯವಾಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು.ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ನಾಲ್ಕೂ ಸದನವನ್ನೂ ಪ್ರತಿನಿಧಿಸಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗೋದು ತೀರಾ ಅಪರೂಪ ಎಂದರು.
೮೭ ವರ್ಷದ ಅವರು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದರು.
ಈ ವೇಳೆ ಜಿಲ್ಲೆಯ ಐದು ಕ್ಷೇತ್ರದ ಶಾಸಕರುಗಳು, ವಿವಿಧ ಪಕ್ಷದ ಮುಖಂಡರುಗಳು, ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ನೂರಾರು ಜನರು ಅಂತಿಮ ದರ್ಶನ ಪಡೆದರು.