ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಇದಾಗಲೇ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ವಾರಣಾಸಿಯ ಗುಲಾಬಿ ಮೀನಕರಿ ಕುಶಲಕರ್ಮಿಯೊಬ್ಬರು ಚಿನ್ನ, ಬೆಳ್ಳಿ ಮತ್ತು ವಜ್ರಗಳ ಬಳಸಿಕೊಂಡು ಗುಲಾಮಿ ಮೀನಕರಿಯಲ್ಲಿ ರಾಮ ಮಂದಿರದ ಸುಂದರ ಪ್ರತಿಕೃತಿ ತಯಾರಿಸಿದ್ದು, ಈ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ವಾರಣಾಸಿಯ ಗಾಯ್ ಘಾಟ್ ನಿವಾಸಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಗುಲಾಬಿ ಮೀನಕರಿ ಕುಶಲಕರ್ಮಿ ಕುಂಜ್ ಬಿಹಾರಿ ಈ ಪ್ರತಿಕೃತಿಯನ್ನು ತಯಾರಿಸಿದ್ದು, ಈ ಪ್ರತಿಕೃತಿಯನ್ನು ಪೂರ್ಣಗೊಳಿಸಲು ಅವರು 108 ದಿನಗಳನ್ನು ತೆಗೆದುಕೊಂಡಿದ್ದಾರೆ. ಮೀನಕರಿ ಕಲಾಕೃತಿಯನ್ನು ರಚಿಸುವಲ್ಲಿ ಪರಿಣಿತಿ ಹೊಂದಿರುವ ಕುಂಜ್, ಮೊದಲಿಗೆ ಮೀನಕರಿಯಿಂದ ರಾಮ ಮಂದಿರದ ಪ್ರತಿಕೃತಿಯನ್ನು ರಚಿಸಿ, ನಂತರ ಅದರ ಮೇಲ್ಮೈಯನ್ನು ಚಿನ್ನ, ಅನ್ ಕಟ್ ವಜ್ರ ಮತ್ತು ಬೆಳ್ಳಿಯಿಂದ ಅಲಂಕರಿಸಿದ್ದಾರೆ. ಜೊತೆಗೆ ಇವರು ತಯಾರಿಸಿದಂತಹ ರಾಮ ಮಂದಿರದ ಪ್ರತಿಕೃತಿಯ ಒಳ ಭಾಗದಲ್ಲಿ ಚಿನ್ನದಿಂದ ಮಾಡಿದಂತಹ ರಾಮ ಲಲಾ ವಿಗ್ರಹ ಸಹ ಇರಿಸಿದ್ದಾರೆ.
ಮೊದಲಿಗೆ ಮೀನಕರಿಯಿಂದ ರಾಮ ಮಂದಿರ ರಚಿಸಿ, ಅದರ ಹೊರ ವಿನ್ಯಾಸ ರಚಿಸಲು ಚಿನ್ನದ ಜೊತೆಗೆ ಬೆಳ್ಳಿಯನ್ನು ಸಹ ಬಳಸಿದ್ದಾರೆ. ಮತ್ತು ಅನ್ ಕಟ್ ವಜ್ರಗಳನ್ನು ಬಳಸಿ ಗೋಪುರ ಅಲಂಕರಿಸಿದ್ದಾರೆ. ಹೀಗೆ ಚಿನ್ನ, ಒಂದೂವರೆ ಕಿಲೋ ಬೆಳ್ಳಿ ಮತ್ತು ಅನ್ ಕಟ್ ವಜ್ರಗಳಿಂದ ಮಾಡಲ್ಪಟ್ಟ ಈ ಪ್ರತಿಕೃತಿ 12 ಇಂಚು ಎತ್ತರ, 12 ಇಂಚು ಉದ್ದ ಮತ್ತು 8 ಇಂಚು ಅಗಲ ಹೊಂದಿದ್ದು, ಸುಮಾರು 2.5 ಕೆ.ಜಿ.ಯಷ್ಟು ತೂಗುತ್ತದೆ.