ಪರಿವರ್ತನೆಯ ಕಾಲದ 4 ಡಿಗಳ ಬಗ್ಗೆ ಹೊಸ ವ್ಯಾಖ್ಯಾನ – ಎಬಿವಿಪಿ ಸಮಾವೇಶದಲ್ಲಿ ಮುಕುಂದರ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69ನೇ ರಾಷ್ಟ್ರೀಯ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಮುಕುಂದ ಅವರು ‘4ಡಿ’ ವ್ಯಾಖ್ಯಾನವೊಂದನ್ನು ಕಟ್ಟಿಕೊಟ್ಟಿದ್ದಾರೆ.

ವೈಶ್ವಿಕ ವೇದಿಕೆಯಲ್ಲಿ ಭಾರತ ಮತ್ತದರ ಯುವ ಜನಾಂಗದ ಪಾತ್ರ ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು. “ಜಗತ್ತು ಪ್ರಮುಖ ಪರಿವರ್ತನೆಯ ಹಾದಿಯಲ್ಲಿದೆ. 4 ಬಗೆಯ ಡಿಗಳು ಈ ಪರಿವರ್ತನೆಯ ಗುಣಲಕ್ಷಣ ಎಂದು ಗುರುತಿಸಲಾಗುತ್ತಿದೆ.” ಎಂದ ಅವರು ಈ 4ಡಿಗಳನ್ನು ವಿವರಿಸಿದ್ದಾರೆ.

ಡಿಜಿಟಲ್ ಟ್ರಾನ್ಸಫರ್ಮೇಶನ್ (ಡಿಜಿಟಲ್ ಪರಿವರ್ತನೆ), ಡಿಕಾರ್ಬನೈಸೇಷನ್ (ಇಂಗಾಲ ವಿಸರ್ಜನೆ ಕಡಿತಗೊಳಿಸುವಿಕೆ), ಡಿಗ್ಲೊಬಲೈಸೇಷನ್ (ಜಾಗತೀಕರಣದಿಂದ ಹೊರಬರುವ ಪ್ರಕ್ರಿಯೆ), ಡೆಮಾಗ್ರಫಿಕ್ ಟ್ರಾನ್ಸಿಶನ್ (ಜನಸಂಖ್ಯಾ ಸಂರಚನೆಯಲ್ಲಿನ ಬದಲಾವಣೆ) ಇವೇ ಆ ನಾಲ್ಕು ‘ಡಿ’ ಗಳು ಎಂದವರು ಹೇಳಿದ್ದಾರೆ.

ಈ ನಾಲ್ಕೂ ಪರಿವರ್ತನೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಅದಕ್ಕೆ ಕಾರಣ ಇಲ್ಲಿನ ಅತಿದೊಡ್ಡ ಯುವ ಕೆಲಸಗಾರರ ಸಮೂಹ. ಜನಧನ, ಆಧಾರ್ ಮತ್ತು ಮೊಬೈಲ್ ದೂರವಾಣಿ ಮೂಲಕ ದೇಶವು ಅದಾಗಲೇ ಕಟ್ಟಕಟೆಯ ವ್ಯಕ್ತಿಯನ್ನು ಡಿಜಿಟಲ್ ಸಾಧನದ ಮೂಲಕ ತಲುಪುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ. ಇಂಧನ ಪರಿವರ್ತನೆ ವಿಭಾಗದಲ್ಲಿ ಸಹ ಭಾರತ ಅನ್ವೇಷಣಾತ್ಮಕ ದಾರಿಯನ್ನು ಹಿಡಿದಿದೆ. ಜಾಗತಿಕ ಪೂರೈಕೆ ಜಾಲಗಳನ್ನು ಜಾಗತೀಕರಣದ ಮಾದರಿಯಿಂದ ಹೊರಗೆ ತರುವ ಕಾರ್ಯದಲ್ಲೂ ಭಾರತ ಮುಂದಿದೆ ಎಂದು ಮುಕುಂದ ವಿಶ್ಲೇಷಿಸಿದ್ದಾರೆ.

ಡಿಸೆಂಬರ್ 8ರಿಂದ ಪ್ರಾರಂಭವಾಗಿರುವ ಎಬಿವಿಪಿ ರಾಷ್ಟ್ರೀಯ ಸಮಾವೇಶವು ಡಿಸೆಂಬರ್ 10ರಂದು ಮುಕ್ತಾಯವಾಗಲಿದೆ. ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಬಂದಿರುವ ಸುಮಾರು 10,000ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!