ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಸ್ಥಳೀಯ ಉತ್ಪಾದನೆಗೆ ಭಾರತ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ಏರಿಕೆಯಾಗಿದ್ದು 2023ನೇ ಹಣಕಾಸಿನ ವರ್ಷದಲ್ಲಿ ಸ್ಮಾರ್ಟ್ ಫೋನ್ ರಫ್ತು ಬರೋಬ್ಬರಿ 85 ಸಾವಿರ ಕೋಟಿ ರೂ. ಮೌಲ್ಯದ ಗಡಿಯನ್ನು ದಾಟಿದೆ.
ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಐಎಎನ್‌ಎಸ್‌ಗೆ ಒದಗಿಸಿದ ಮಾಹಿತಿಯ ಪ್ರಕಾರ 2022-23ನೇ ಆರ್ಥಿಕ ವರ್ಷದಲ್ಲಿ ಭಾರತವು 10 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಭಾರತ ಸರ್ಕಾರದ ಉತ್ಪಾದನೆ ಆಧರಿತ ಉತ್ತೇಜನ (PLI) ಯೋಜನೆಯು ಸ್ಥಳೀಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿದ್ದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಭಾರತದಿಂದ ಸ್ಮಾರ್ಟ್‌ಫೋನ್ ರಫ್ತುಗಳು ಈ ವರ್ಷ ದ್ವಿಗುಣಗೊಂಡಿವೆ.
ICEA ದತ್ತಾಂಶದ ಪ್ರಕಾರ ಭಾರತವು ಪ್ರಸ್ತುತ ಮೊಬೈಲ್ ಫೋನ್‌ಗಳನ್ನು ಜಾಗತಿಕವಾಗಿ ಐದು ಪ್ರಮುಖ ದೇಶಗಳಿಗೆ ರಫ್ತು ಮಾಡುತ್ತಿದ್ದು ಅವುಗಳೆಂದರೆ ಯುಎಇ, ಯುಎಸ್, ನೆದರ್ಲ್ಯಾಂಡ್ಸ್, ಯುಕೆ ಮತ್ತು ಇಟಲಿ. ಭಾರತದಲ್ಲಿ ಮಾರಾಟವಾಗುವ ಶೇಕಡಾ 97 ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದ್ದು ಭಾರತ ಈಗ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿ ಹೊರ ಹೊಮ್ಮಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಪ್ರಕಾರ ಭಾರತವು 2023ರಲ್ಲಿ ಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಲಿದ್ದು 1 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ದಾಟಲಿದೆ.