Monday, December 1, 2025

ನಂದಿಬೆಟ್ಟದ ತಪ್ಪಲಲ್ಲಿ ಚಿರತೆಗಳ ದಂಡು: ಆತಂಕದಲ್ಲಿ ಚಿಕ್ಕಬಳ್ಳಾಪುರ ಗ್ರಾಮಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹುಲಿ ಮತ್ತು ಚಿರತೆಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಇತ್ತೀಚೆಗೆ ಚಿರತೆಗಳ ಹಿಂಡೇ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ತೀವ್ರ ಭಯ ಹುಟ್ಟಿಸಿದೆ.

ಸಾಮಾನ್ಯವಾಗಿ ನಂದಿಬೆಟ್ಟ ಮತ್ತು ಸ್ಕಂದಗಿರಿಗಳಂತಹ ಬೆಟ್ಟಗಳಿಂದ ಕೂಡಿದ ಈ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಓಡಾಟ ವಿರಳ. ಹೀಗಿರುವಾಗ, ಭಾನುವಾರ ತಿಪ್ಪೇನಹಳ್ಳಿ ಗ್ರಾಮದ ಕಲ್ಲುಬಂಡೆಗಳ ಮೇಲೆ ಹಲವು ಚಿರತೆಗಳು ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಬೀಡುಬಿಟ್ಟಿರುವ ಈ ಚಿರತೆಗಳ ಹಿಂಡು, ಪ್ರತಿದಿನ ಒಂದೊಂದು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವು ಗ್ರಾಮದ ಸಾಕುಪ್ರಾಣಿಗಳಾದ ಹಸು ಮತ್ತು ನಾಯಿಗಳನ್ನು ಬೇಟೆಯಾಡಿ ತಿಂದು ಹಾಕುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆ ಮುದ್ದೇನಹಳ್ಳಿಯ ವಿಟಿಯು ಕಾಲೇಜು ಕ್ಯಾಂಪಸ್ ಮತ್ತು ಸತ್ಯಸಾಯಿ ಆಶ್ರಮ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿರುವುದು ವರದಿಯಾಗಿದೆ. ನಗರದ ಹಲವೆಡೆ ನಾಯಿಗಳು, ಹಸುಗಳು ಮತ್ತು ನವಿಲುಗಳ ಬೇಟೆಯಾದ ಬಳಿಕ, ರೈತರು ತಮ್ಮ ತೋಟಗಳು ಮತ್ತು ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. “ಚಿರತೆಗಳು ಮನುಷ್ಯರನ್ನು ಕಂಡರೆ ಸಾಮಾನ್ಯವಾಗಿ ಭಯಪಟ್ಟು ದೂರ ಹೋಗುತ್ತವೆ. ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ. ಚಿರತೆಗಳು ಕಾಣಿಸಿಕೊಂಡಲ್ಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆ ನೀಡದೆ, ತಕ್ಷಣ ನಮಗೆ ಮಾಹಿತಿ ನೀಡಬೇಕು,” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

error: Content is protected !!