ಒಂದು ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಕನಸು ಕಾಣುತ್ತಿದೆ: ಹೆಚ್.ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೆ ಸಿದ್ದರಾಮಯ್ಯ ಅವರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಇದೀಗ ಇದೇ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ, ಅವರು ನನ್ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್ ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ. ಒಂದು ದಿನವಾದರೂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಕಳಿಸಬೇಕೆಂದು ಚರ್ಚೆ ಮಾಡಲಾಗಿದೆ ಆರೋಪ ಮಾಡಿದರು.

ನಾನು ಜಾಮೀನು ತೆಗೆದುಕೊಂಡಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಜಾಮೀನು ಪಡೆದಿದ್ದೇನೆ ಎಂದು ಅವರು ಹೇಳಿದರು.

ಕಳೆದ 3-4 ತಿಂಗಳಿಂದ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. 80 ಕೋಟಿ ರೂ. ಗುಳುಂ ಮಾಡಿರೋ ಪ್ರಕರಣದಲ್ಲಿ ಏನಾಯಿತು? ಎಸ್‌ಐಟಿ ಯಾರನ್ನೋ ಬಂಧನ ಮಾಡಿದ್ದರು. ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದಿರಿ. ನಾನು ಯಾವುದೇ ಅಧಿಕಾರಿಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ನಾನು ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್‌ಗೆ ಲೀಕ್ ಮಾಡಿರುವ ಹಿನ್ನೆಲೆಯಲ್ಲಿ ನಾನು ಪ್ರಶ್ನೆ ಮಾಡಿದ್ದು ಎಂದು ಅವರು ಹೇಳಿದರು.

ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜೊತೆ ಅವರ ನೇರ ನಂಟಿದೆ. ಸಮಾಜ ವಿದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ? ಕ್ರಿಮಿನಲ್ ಪ್ರಕರಣದಲ್ಲಿ ಅಧಿಕಾರಿಯೇ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಜಾಮೀನು ಮೇಲೆ ಹೊರಗಡೆ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಂಥ ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸಲುವಾಗಿ ಜಾಮೀನು ತೆಗೆದುಕೊಂಡೆ. ಆ ಅಧಿಕಾರಿ ಮೇಲೆಯೂ ಪ್ರಕರಣ ಇದೆ. ಅವರು ಆರೋಪಿ ನಂಬರ್ 2, ಹೈಕೋರ್ಟ್ ನಲ್ಲಿ ತನಿಖೆಗೆ ಸ್ಟೇ ತಗೊಂಡಿದ್ದಾರೆ. ನಾನು ಬರೀ ಜಾಮೀನು ತಗೊಂಡಿದ್ದೇನೆ. ಸ್ಟೇ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!