ಹೊಸದಿಗಂತ ವರದಿ ಸುಂಟಿಕೊಪ್ಪ:
ಹೊಸ ವರ್ಷದ ಶುಭಾಶಯ ತಿಳಿಸಲೆಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವಿಗೀಡಾದ ಘಟನೆ ನಡೆದಿದೆ.
ಮೂಲತಃ ಚೆಟ್ಟಳ್ಳಿ ಸಮೀಪದ ಅಬ್ಯಾಲ ಗ್ರಾಮದವರಾಗಿದ್ದು, ಇಲ್ಲಿಗೆ ಸಮೀಪದ ಕೆದಕಲ್ ಡಿ ಬ್ಲಾಕ್ ತೋಟದಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಲ್ಲಾರಂಡ ಹರೀಶ್ ತಮ್ಮಯ್ಯ (55) ಮೃತ ದುರ್ದೈವಿ.
ಜ.1ರಂದು ಸುಂಟಿಕೊಪ್ಪಕ್ಕೆ ಬಂದಿದ್ದ ಹರೀಶ್ ಅವರು ಡಿ ಬ್ಲಾಕ್ ತೋಟದಲ್ಲಿರುವ ವಸತಿಗೃಹಕ್ಕೆ ಹಿಂತಿರುಗಲು ರಾತ್ರಿ 7.15 ರ ಸಮಯದಲ್ಲಿ ಸಿಟಿ ಬಸ್’ನಲ್ಲಿ ಪ್ರಯಾಣಿಸಿದ್ದರೆನ್ನಲಾಗಿದೆ.
ಕೆದಕಲ್’ನಲ್ಲಿ ಬಸ್ ಇಳಿದು ಅಲ್ಲಿಯೇ ಇದ್ದ ಪರಿಚಿತ ಅಂಗಡಿ ಮಾಲಕರಿಗೆ ಹೊಸ ವರ್ಷದ ಶುಭಾಶಯ ತಿಳಿಸಲೆಂದು ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗವಾಗಿ ಧಾವಿಸಿ ಬಂದ ಅಪರಿಚಿತ ಬೊಲೆರೋ ವಾಹನ ಹರೀಶ್ ಅವರಿಗೆ ಬಲವಾಗಿ ಅಪ್ಪಳಿಸಿ ಪರಾರಿಯಾಗಿತ್ತು.
ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಹರೀಶ್ ಅವರನ್ನು ರಾತ್ರಿಯೇ ಮಂಗಳೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕೆತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಅವರು ಅಸು ನೀಗಿದ್ದಾರೆ. ಮೃತ ಹರೀಶ್, ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.