ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾನೆ.
ನ್ಯಾಸರ್ಗಿ ಗ್ರಾಮದ ಮಂಜುನಾಥ ದುರ್ಗಪ್ಪ ಭೋವಿ(೫೭) ಎಂಬಾತನೆ ಸಾವನ್ನಪ್ಪಿದ ವ್ಯಕ್ತಿ. ಆರೋಪಿತ ಹನುಮಂತ ಹರಪನಳ್ಳಿಯಾಗಿದ್ದಾನೆ.
ಘಟನೆ ವಿವರ; ಸೆಪ್ಟೆಂಬರ್ ೧೭ ರಂದು ರಾತ್ರಿ ನ್ಯಾಸರ್ಗಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮೃತ ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿ, ಗಲಾಟೆಯಾಗಿತ್ತು. ಈ ವೇಳೆ ಹನುಮಂತ ಹರಪನಹಳ್ಳಿ ಈತನು ಮಂಜುನಾಥ್ ಮೇಲೆ ಜಾತಿ ನಿಂದನೆ ಮಾಡಿದಲ್ಲದೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಎಂದು ಗಾಯಾಳು ಮಂಜುನಾಥ ಭೋÃವಿವಡ್ಡರ್ ಪುತ್ರ ಮುಂಡಗೋಡ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜಾತಿನಿಂದನೆ ಸೇರಿದಂತೆ ಹಲ್ಲೆ ಪ್ರಕರಣದಡಿ ಆರೋಪಿತ ಹನುಮಂತ ಹರಪನಳ್ಳಿ ಎಂಬುವವನನ್ನು ಬಂಧಿಸಿದ್ದರು. ಆದರೆ ಇದೀಗ ಹಲ್ಲೆಗೊಳಗಾದ ಮಂಜುನಾಥ್ ಭೋವಿವಡ್ಡರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ; ವಿಷಿಯ ತಿಳಿದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ನ್ಯಾಸರ್ಗಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಭೋವಿ ಸಮಾಜದ ಮುಖಂಡರ ಜೊತೆ ಚರ್ಚಿಸಿದರು. ಡಿವೈಎಸ್ಪಿ ಗಣೇಶ, ಸಿಪಿಐ ಬಿ.ಎಸ್ ಲೋಕಾಪು ಪಿಎಸೈಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ ಉಪಸ್ಥಿತರಿದ್ದರು.