ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಜಡ್ಜ್ ಸಹಿತ 68 ನ್ಯಾಯಾಧೀಶರ ಬಡ್ತಿ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಬಂತು ಅರ್ಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಮೋದಿ ಸರ್​ನೇಮ್​ಗೆ (Modi Sir name Case) ಅಪಮಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್​ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ಹರೀಶ್ ಹಸ್ಮುಖಭಾಯ್ ವರ್ಮಾ ಮತ್ತು ಗುಜರಾತ್​​ನ ಇತರ 68 ನ್ಯಾಯಾಂಗ ಅಧಿಕಾರಿ (Judicial Officers)ಗಳಿಗೆ ಬಡ್ತಿ ನೀಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ (Supreme Court) ಒಪ್ಪಿದೆ.

ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಮೇ 8 ರಂದು ವಿಚಾರಣೆ ನಡೆಸಲಿದೆ.

ಸೀನಿಯರ್ ಸಿವಿಲ್​ ಜಡ್ಜ್​ ಕೇಡರ್​ನ ಇಬ್ಬರು ಹಿರಿಯ ನ್ಯಾಯಾಂಗ ಅಧಿಕಾರಿಗಳಾದ ರವಿಕುಮಾರ್ ಮಾಹೇತಾ ಮತ್ತು ಸಚಿನ್ ಪ್ರತಾಪ್ರೈ ಮೆಹ್ತಾ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ರವಿಕುಮಾರ್ ಮಾಹೇತಾ ಅವರು ಗುಜರಾತ್ ಸರ್ಕಾರದ ಕಾನೂನು ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿ ಮತ್ತು ಸಚಿನ್​ ಪ್ರತಾಪ್ರೈ ಮೆಹ್ತಾ ಅವರು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿದ್ದಾರೆ.

68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರ ಕೇಡರ್​​ಗೆ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್​ಗೆ ಮಾರ್ಚ್​ 28ರಂದು ಅರ್ಜಿ ಸಲ್ಲಿಸಿದ್ದರು.ನೇಮಕಾತಿಯನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಯಾರೆಲ್ಲ ನ್ಯಾಯಾಂಗ ಅಧಿಕಾರಿಗಳು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಹೊಂದಿದ್ದಾರೋ ಅವರ ಪಟ್ಟಿಯನ್ನು ಗುಜರಾತ್ ಹೈಕೋರ್ಟ್​ ಮಾರ್ಚ್ 10ರಂದು ಬಿಡುಗಡೆ ಮಾಡಿತ್ತು. ಹಾಗೇ, ಇವರ ನೇಮಕಾತಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರ ಬೆನ್ನಲ್ಲೇ ಅರ್ಜಿದಾರರು ತಮ್ಮ ವಕೀಲರಾದ ಪೂರ್ವೀಶ್​ ಮಲ್ಕನ್​ ಮೂಲಕ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

‘ಜಿಲ್ಲಾ ನ್ಯಾಯಾಧೀಶರ ಸ್ಥಾನಕ್ಕೆ ಬಡ್ತಿ ನೀಡಲು ಹೆಸರಿಸಲಾದ 68 ನ್ಯಾಯಾಂಗ ಅಧಿಕಾರಿಗಳ ಹೆಸರು ಒಪ್ಪಿತವಾಗಿಲ್ಲ. ಈ ಪಟ್ಟಿ ರದ್ದುಗೊಳಿಸುವಂತೆ ಗುಜರಾತ್ ಹೈಕೋರ್ಟ್​ಗೆ ಸುಪ್ರೀಂಕೋರ್ಟ್ ಸೂಚನೆ ಕೊಡಬೇಕು. ಅಷ್ಟೇ ಅಲ್ಲ, ಹಿರಿತನ ಮತ್ತು ಅರ್ಹತೆಯ ತತ್ವಗಳ ಆಧಾರದ ಮೇಲೆ ಹೊಸ ಪಟ್ಟಿ ರಚಿಸುವಂತೆ ಸೂಚಿಸಬೇಕು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇನ್ನು ಉಪ ವಿಭಾಗೀಯ ನ್ಯಾಯಾಂಗಕ್ಕೆ ಸಂಬಂಧಪಟ್ಟಂತೆ ಏಪ್ರಿಲ್​ 18ರಂದು ಗುಜರಾತ್​ ಹೈಕೋರ್ಟ್​ ಜಡ್ಜ್​​ಗಳ ವರ್ಗಾವಣೆ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಅದರ ಅನ್ವಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ಹರೀಶ್ ಹಸ್ಮುಖಭಾಯ್ ವರ್ಮಾ ಅವರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ, ರಾಜಕೋಟ್​ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಏಪ್ರಿಲ್​ 28ರಂದು ಅಸಮಾಧಾನ ವ್ಯಕ್ತಪಡಿಸಿದೆ. ಇಷ್ಟು ಅವಸರದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಬಡ್ತಿ ನೀಡುವ ಮತ್ತು ಜಡ್ಜ್​ಗಳನ್ನು ವರ್ಗಾವಣೆ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!