SPECIAL REPORT | ಅಳಿವಿನಂಚಿನ ‘ಮುಗೇರರ ಆಟಿಕಳೆಂಜ’ ಪುನರುಜ್ಜೀವನಕ್ಕೆ ಸಮಾನ ಮನಸ್ಕರಿಂದ ಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮ ಪರಿಸರದಲ್ಲಿ ತಲೆತಲಾಂತರದಿಂದ ನಡೆದು ಬಂದ ಅಳಿವಿನಂಚಿನಲ್ಲಿರುವ ‘ಮುಗೇರರ ಆಟಿಕಳೆಂಜ’ ಆಚರಣೆಯನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಮತ್ತು ತುಳು ವಿಕಿಮೀಡಿಯನ್ನರ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಯ ನಿರ್ದೇಶಕ ಭರತೇಶ ಅಲಸಂಡೆಮಜಲು ಹಾಗೂ ಮಾರ್ಗದರ್ಶಕರಾದ ವಿಶ್ವನಾಥ ಬದಿಕಾನ, ಕಿಶೋರ್ ಕುಮಾರ್ ರೈ ಶೇಣಿ, ಯದುಪತಿ ಗೌಡ, ದಿವಾ ಕೊಕ್ಕಡ ಮೊದಲಾದವರ ನೇತೃತ್ವದಲ್ಲಿ ವಿನೋದ ಮಮತಾ ರೈ, ಯಕ್ಷಿತಾ ಮೂಡುಕೊಣಾಜೆ, ಚಿದಾನಂದ ಕಂಪ ಅವರನ್ನೊಳಗೊಂಡ ಸಂಶೋಧನಾ ತಂಡವು ಸ್ಥಳೀಯ ಜನಪದ ಕಲಾವಿದರ ಬೆಂಬಲದೊಂದಿಗೆ ತುಳುನಾಡಿನ ಅಪರೂಪದ ಅಳಿವಿನಂಚಿನಲ್ಲಿರುವ ಮುಗೇರರ ಆಟಿಕಳೆಂಜವನ್ನು ದಾಖಲೀಕರಣ ಮಾಡಲು ಯೋಜಿಸಿತು.

‘ಆಟಿಕಳೆಂಜ’ ತುಳುನಾಡಿನ ಪಾರಂಪರಿಕ ಕುಣಿತ. ಇದಕ್ಕೆ ಸಂಬಂದಿಸಿದ ಸಾಂಸ್ಕೃತಿಕ ಹಾಗು ಆಚರಣಾತ್ಮಕ ಮಾಹಿತಿಗಳನ್ನು ದಾಖಲಿಕರಣಗೊಳಿಸಿ ಪುನರುಜ್ಜೀವನಗೊಳಿಸಿ, ತುಳುನಾಡಿನ ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಕೇವಲ ಸಂಪ್ರದಾಯವನ್ನು ಉಳಿಸಲು ಮಾತ್ರವಲ್ಲದೆ ಆಧುನಿಕ ವಿದ್ಯಮಾನದಲ್ಲಿ ತುಳು ಜನರ ಸಾಂಸ್ಕೃತಿಕ ಮೂಲದ ಮರುನೋಟದೊಂದಿಗೆ ಭವಿಷ್ಯದ ಪೀಳಿಗೆಗೆ ಪಾರಂಪರಿಕ ಮಾಹಿತಿಗಳನ್ನು ತೆರೆದಿಡುವ ಮಾಧ್ಯಮವಾಗಿ ರೂಪುಗೊಂಡಿದೆ.

ಮುಗೇರರ ಆಟಿಕಳೆಂಜವು ಶತಮಾನಗಳ ಹಳೆಯ ಆಚರಣೆಯಾಗಿದ್ದು, ಪುದುವೆಟ್ಟು ಗ್ರಾಮದಲ್ಲಿ ಮುಗೇರ ಸಮುದಾಯದವರು ನಡೆಸುತ್ತಾರೆ. ಆಧುನಿಕ ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ವಲಸೆ ಮತ್ತು ರಾಜಕೀಯ ಧ್ರುವೀಕರಣದ ಕಾರಣದಿಂದ ಇಲ್ಲಿನ ಯುವಜನತೆ ಆಸಕ್ತಿ, ಆರ್ಥಿಕ ಇಚ್ಛಾಸಕ್ತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ಕಳೆದ 12 ವರುಷಗಳಿಂದ ಮುಗೇರರ ಆಟಿಕಳೆಂಜ ಕುಣಿತವೂ ಸಂಪೂರ್ಣವಾಗಿ ನಿಂತುಹೋಗಿತ್ತು. ಮುಗೇರರ ಆಟಿಕಳೆಂಜದಲ್ಲಿ ಸ್ಥಳೀಯವಾಗಿ ದೊರಕುವ ಸೇಡಿ ಅಥವಾ ಜೇಡಿ ಮಣ್ಣನ್ನು ಬಿಳಿ ಬಣ್ಣವಾಗಿ ಮತ್ತು ಹೆಂಚಿನ ತುಂಡುಗಳನ್ನು ಅರೆದು ಕೆಂಪು ಬಣ್ಣ ಮಾಡಿ ತೆಂಗಿನ ಗೆರಟೆಯಲ್ಲಿ ಅರದಲವಾಗಿ ತುಂಬಿಸಿಡುತ್ತಾರೆ.  ಒಂದು ನಿಶ್ಚಿತ ಪ್ರದೇಶ ಅಥವಾ ಸಮುದಾಯದ ಹಿರಿಯನ ಮನೆಯಲ್ಲಿ ಒಟ್ಟುಸೇರಿ ತಯಾರಿಸಿದ ಪ್ರಾಕೃತಿಕ ಬಣ್ಣವನ್ನು ಮೈಗೆ ಬಳಿದು, ತೇರು ಮತ್ತು ಭೂತ ಸಂಪಿಗೆ ಹೂವುಗಳ ಕರೀಟಿಗಳನ್ನು ಕಟ್ಟಿ  ಶೃಂಗರಿಸಿ, ಕೈಯಲ್ಲಿ ಅತ್ರೊ ಹಿಡಿದುಕೊಂಡು ಗ್ರಾಮದ ಮನೆ-ಮನೆಗೆ ತೆರಳಿ ಕುಣಿತಗಳನ್ನು ಪ್ರದರ್ಶಿಸುತ್ತಾರೆ. ಸಾಂಪ್ರದಾಯಿಕವಾಗಿ ಕಳೆಂಜ ಕಳೆಂಜ.. ಹಾಡನ್ನು ಹಾಡುತ್ತಾರೆ.  ಪ್ರತೀ ಮನೆಗಳಲ್ಲಿ ನೀಡುವ ಉಡುಗೊರೆಗಳನ್ನು ಸ್ವೀಕರಿಸಿ ಸಂಗ್ರಹಿಸಿಕೊಳ್ಳುತ್ತಾರೆ. ಮುಗೇರರು ಕಳೆಂಜನನ್ನು ‘ಬೆರ್ಮೆರೆ ಮಾಣಿ’ ಎಂದು ಕರೆಯುತ್ತಾರೆ. ಕಳೆಂಜ ಊರಿನ ಮನೆ ಮಂದಿ ಮತ್ತು ಜಾನುವಾರುಗಳನ್ನು ಹಾನಿಯಿಂದ ರಕ್ಷಿಸುತ್ತಾನೆ.  ಆದಾಗ್ಯೂ, ಈ ಆಚರಣೆಯನ್ನು ಬೆಳ್ತಂಗಡಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಲಾಗಲಿಲ್ಲ.  ಅಲ್ಲಿ ಒಂದು ಕಾಲದಲ್ಲಿ ಮೂಲಪಾಲಕರಾಗಿದ್ದ ಮುಗೇರ ಸಮುದಾಯವು ಆಧುನೀಕರಣ, ಮಾರ್ಗದರ್ಶನದ ಕೊರತೆ ಮತ್ತು ವಲಸೆಯ ಕಾರಣದಿಂದ ಈ ಕುಣಿತವನ್ನು ಕೈಬಿಟ್ಟಿರಬಹುದು.
ಅಳಿವಿನಂಚಿನಲ್ಲಿರುವ ಮುಗೇರರ ಆಟಿಕಳೆಂಜವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ವಿಕಿಮೀಡಿಯನ್ ತಂಡದ ಸದಸ್ಯರು ಮತ್ತು ಸ್ಥಳೀಯ ವಿದ್ವಾಂಸರ ತಂಡದ ಸಹಕಾರದಿಂದ  ಸಮುದಾಯವನ್ನು 2024ರ ಆಟಿತಿಂಗಳಲ್ಲಿ ಭೇಟಿ ಮಾಡುವ ಮೂಲಕ ದಾಖಲೀಕರಣ ಪ್ರಾರಂಭಿಸಿತ್ತು.  ಪೂರ್ವಭಾವಿಯಾಗಿ ತುಳುವರ ಕಾರ್ತಿಂಗಳಿನಲ್ಲೇ ಸಮುದಾಯವನ್ನು ಭೇಟಿಮಾಡಿದ ಪ್ರಯತ್ನದ ಫಲವಾಗಿ ೩೦ಕ್ಕೂ ಹೆಚ್ಚು ಮಂದಿ ಸಮುದಾಯದ ಸದಸ್ಯರು ಭಾಗವಹಿಸಿದ್ದರು. 10ಕ್ಕೂ ಹೆಚ್ಚು ಕಲಾವಿದರು ೫೦ಕ್ಕೂ ಹೆಚ್ಚು ಮನೆಗಳಲ್ಲಿ ವಾರಗಳಷ್ಟು ದಿನ ‘ಮುಗೇರರ ಆಟಿಕಳೆಂಜ’ವನ್ನು ಪ್ರದರ್ಶಿಸಿದರು. ಪುದುವೆಟ್ಟು ಮೇಲಿನಡ್ಕ ಮುಗೇರ ಸಮುದಾಯದ ಹಿರಿಯರಾದ ಕರಿಯ ಮತ್ತು ನಾರಾಯಣ ಇವರ ತಂಡ ಈ ಕುಣಿತಕ್ಕೆ ಜೀವ ಕೊಟ್ಟಿತ್ತು. ಛಾಯಚಿತ್ರದಲ್ಲಿ ಸುಜಿತ್ ಮುಗೇರೋಡಿ ಮತ್ತು ಚಂದ್ರಶೇಖರ ಬಂದರು ಸಹಕರಿಸಿದರು.

ಮುಗೇರರ ಆಟಿಕಳೆಂಜ ಕುಣಿತವನ್ನು ತಿಳಿದ ಹಿರಿಯರಿದ್ದರೂ ಕುಣಿತಕ್ಕೆ ಬೇಕಾದ ಮೂಲ ಸಲಕರಣೆಗಳನ್ನು ಸಂರಕ್ಷಿಸಿಡುವ ಮುಂದಾಲೋಚನೆಯಿಲ್ಲ.  ಹಾಗಾಗಿ ಈ ಸಮುದಾಯವು ಹಿರಿಯರಿಂದ ಕಿರಿಯ ಸದಸ್ಯರಿಗೆ ತರಬೇತಿ ನೀಡಲು ಕ್ರಮಗಳನ್ನು ಕೈಗೊಳ್ಳಬೇಕಾಗಿದ ಅವಶ್ಯಕತೆಯಿದೆ.  ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಸಹಕಾರ ಪಡೆದು, ಈ ಆಚರಣಾತ್ಮಕ ಕುಣಿತವನ್ನು ನಿರ್ವಹಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಉಳಿಸಿ ಬೆಳೆಸಬೇಕೆಂಬುದು ವಿಕೀಮಿಡಿಯನ್ನರ ಅಭಿಪ್ರಾಯ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!