ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಬಿಡುಗಡೆ ಸಂಬಂಧ ಕಾನೂನು ಸುವ್ಯವಸ್ಥೆಗಾಗಿ ಕೊಳ್ಳೇಗಾಲಕ್ಕೆ ಬಂದಿದ್ದ ಕೆಎಸ್ಆರ್ಪಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು (ಶುಕ್ರವಾರ) ನಡೆದಿದೆ. ಮೋಹನ್ (44) ಮೃತರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ನಡೆಯದಂತೆ ಎಚ್ಚರ ವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್ಪಿ ಮೈಸೂರು ಬೆಟಾಲಿಯನ್ 23 ಸಿಬ್ಬಂದಿ ಕೊಳ್ಳೇಗಾಲದಲ್ಲಿ ಕರ್ತವ್ಯಕ್ಕೆಂದು ಎರಡು ದಿನಗಳ ಹಿಂದೆ ಆಗಮಿಸಿ ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದರು. ಕರ್ತವ್ಯ ಮುಗಿಸಿಕೊಂಡು ಹಾಸ್ಟೆಲ್ನಲ್ಲಿ ತಂಗಿದ್ದ ಹೆಡ್ ಕಾನ್ಸ್ಟೇಬಲ್ ಮೋಹನ್ ಅವರಿಗೆ ಹಠಾತ್ ಹೃದಯಾಘಾತವಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಮೋಹನ್ ಮಡಿಕೇರಿ ಜಿಲ್ಲೆಯ ನಾಪೋಕ್ಲು ಹೋಬಳಿಯ ಕಕ್ಕಬೇ ಗ್ರಾಮದವರು ಎಂದು ತಿಳಿದುಬಂದಿದೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.