ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳ ಹಬ್ಬದ ಬಟ್ಟೆ ತರಲು ಮಾರ್ಕೆಟ್‌ಗೆ ಹೋದ ಬಡ ತಾಯಿಯೊಬ್ಬರು, ಜೇಬಲ್ಲಿದ್ದ ಚಿಲ್ಲರೆ ಕಾಸಿನಲ್ಲಿ ಕೇವಲ 7 ರೂಪಾಯಿ ಕೊಟ್ಟು ತಗದುಕೊಂಡ ಒಂದು ಲಾಟರಿ ಟಿಕೆಟ್ ಇಡೀ ಕುಟುಂಬದ ಹಣೆಬರಹವನ್ನೇ ಬದಲಾಯಿಸಿಬಿಟ್ಟಿದೆ.
ಹೌದು, ಪ್ರತಿದಿನದ ಊಟಕ್ಕೂ ಕಷ್ಟಪಡುತ್ತಿದ್ದ ಕೂಲಿ ಕಾರ್ಮಿಕನ ಸಂಸಾರಕ್ಕೆ ಒಂದೇ ರಾತ್ರಿಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಬಂಪರ್ ಲಾಟರಿ ಹೊಡೆದಿದೆ. ನೆಟ್ಟಿಗರ ಮನಗೆದ್ದಿರೋ ಪಂಜಾಬ್‌ನ ಈ ಬಡ ಕುಟುಂಬದ ಅದೃಷ್ಟದ ಕಥೆ, ರಿಯಲ್ ಲೈಫ್‌ನಲ್ಲಿ ‘ಲಕ್’ ಅಂದ್ರೆ ಏನು ಅನ್ನೋದನ್ನ ಸಾಬೀತು ಮಾಡಿದೆ.
ಪಂಜಾಬ್‌ನ ಕೋಟ್‌ಕಪುರ ನಿವಾಸಿಯಾದ ಬಿಮ್ಲಾ ದೇವಿ ಎಂಬಾಕೆಯೇ ಈ ಅದೃಷ್ಟವಂತೆ. ಕೂಲಿ ಕೆಲಸ ಮಾಡುವ ಪತಿಯನ್ನು ಹೊಂದಿರುವ ಈ ಬಡ ಕುಟುಂಬಕ್ಕೆ ಈ ಲಾಟರಿ ಜಯವು ಹೊಸ ಬದುಕಿನ ಭರವಸೆ ನೀಡಿದೆ.
7 ರೂ. ಟಿಕೆಟ್ ತಂದ ಅದೃಷ್ಟ
ಬಿಮ್ಲಾ ದೇವಿ ಅವರು ತಮ್ಮ ಮಕ್ಕಳಿಗೆ ಬಟ್ಟೆಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿ ರೈಲ್ವೆ ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಇದ್ದ ‘ಸ್ಟಾರ್ ಲಾಟರಿ ಸ್ಟಾಲ್’ ನಿಂದ ಕೇವಲ 7 ರೂಪಾಯಿ ನೀಡಿ ಸಿಕ್ಕಿಂ ಸರ್ಕಾರ ಆಯೋಜಿಸಿದ್ದ ಲಾಟರಿ ಟಿಕೆಟ್ ಒಂದನ್ನು ಕೇವಲ ಕುತೂಹಲಕ್ಕಾಗಿ ಖರೀದಿಸಿದ್ದರು. ಆದರೆ ಈ ಸಣ್ಣ ನಿರ್ಧಾರ ಮರುದಿನವೇ ಅವರ ಇಡೀ ಕುಟುಂಬದ ಹಣೆಬರಹವನ್ನು ಬದಲಾಯಿಸುತ್ತದೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.
ಸಿಹಿ ಹಂಚಿ ಭಾಂಗ್ರಾ ನೃತ್ಯ ಮಾಡಿದ ಕುಟುಂಬ
ಲಾಟರಿ ಫಲಿತಾಂಶ ಪ್ರಕಟವಾದ ತಕ್ಷಣ, ಲಾಟರಿ ಸ್ಟಾಲ್ ಮಾಲೀಕರಾದ ನರೇಶ್ ಮೊಂಗಾ ಅವರು ಬಿಮ್ಲಾ ದೇವಿ ಅವರ ಕುಟುಂಬಕ್ಕೆ ಕರೆ ಮಾಡಿ ನೀವು 1 ಕೋಟಿ ರೂಪಾಯಿ ಗೆದ್ದಿದ್ದೀರಿ ಎಂಬ ಸಿಹಿ ಸುದ್ದಿ ನೀಡಿದ್ದಾರೆ. ಈ ಸುದ್ದಿ ಕೇಳಿ ಆನಂದಬಾಷ್ಪ ಸುರಿಸಿದ ಇಡೀ ಕುಟುಂಬವು ಲಾಟರಿ ಸ್ಟಾಲ್‌ಗೆ ಧಾವಿಸಿದೆ. ಅಲ್ಲಿ ಸ್ಟಾಲ್ ಮಾಲೀಕರು ಸಿಹಿ ನೀಡಿ ಸಂಭ್ರಮಿಸಿದರೆ, ಇತ್ತ ಬಿಮ್ಲಾ ದೇವಿ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಸಾಂಪ್ರದಾಯಿಕ ‘ಭಾಂಗ್ರಾ’ ನೃತ್ಯ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಸಿದ್ದಾರೆ.
ಬಡತನದ ಬೇಗೆಯಿಂದ ಮುಕ್ತಿ, ಮಕ್ಕಳ ಭವಿಷ್ಯಕ್ಕೆ ನೆರವು
ಕೂಲಿ ಕಾರ್ಮಿಕನಾಗಿ ದುಡಿಯುವ ಪತಿಯ ಆದಾಯದಲ್ಲಿ ಇಷ್ಟು ದಿನ ಸಂಸಾರ ನಡೆಸುವುದು ಬಿಮ್ಲಾ ದೇವಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಪ್ರತಿದಿನ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ ಈ ಕುಟುಂಬಕ್ಕೆ ಈ 1 ಕೋಟಿ ರೂಪಾಯಿ ದೊಡ್ಡ ಆಸರೆಯಾಗಿದೆ. ಈ ಹಣವನ್ನು ಏನು ಮಾಡಬೇಕು ಎಂದು ಕುಟುಂಬಸ್ಥರು ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲವಾದರೂ, ಒಂದು ಸಣ್ಣ ಉದ್ಯಮವನ್ನು ಆರಂಭಿಸಿ, ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಸುಂದರ ಭವಿಷ್ಯಕ್ಕಾಗಿ ಈ ಹಣವನ್ನು ವಿನಿಯೋಗಿಸುವುದಾಗಿ ಬಿಮ್ಲಾ ದೇವಿ ತಿಳಿಸಿದ್ದಾರೆ.
ಲಾಟರಿ ಸ್ಟಾಲ್ ಮಾಲೀಕ ನರೇಶ್ ಮೊಂಗಾ ಮಾತನಾಡಿ, “ಕಳೆದ ಆರು ತಿಂಗಳಿನಿಂದ ಈ ಬಿಸಿನೆಸ್ ಮಾಡುತ್ತಿದ್ದು, ನನ್ನ ಅಂಗಡಿಯಲ್ಲಿ ಈ ಹಿಂದೆ ಲಕ್ಷಾಂತರ ರೂಪಾಯಿ ಬಹುಮಾನದ ಟಿಕೆಟ್‌ಗಳು ಮಾರಾಟವಾಗಿದ್ದವು. ಆದರೆ ರೈಲ್ವೆ ನಿಲ್ದಾಣದ ಬಳಿ ಅಂಗಡಿ ಬದಲಾಯಿಸಿದ ನಂತರ 1 ಕೋಟಿ ರೂಪಾಯಿಯ ಬಂಪರ್ ಬಹುಮಾನ ಗೆದ್ದ ಮೊದಲ ಗ್ರಾಹಕರು ಬಿಮ್ಲಾ ದೇವಿ” ಎಂದು ಖುಷಿ ಹಂಚಿಕೊಂಡಿದ್ದಾರೆ.



