ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲೂ ಪ್ರತಿದಿನ ಸದ್ದು ಮಾಡುವ ಏಕೈಕ ಆಹಾರ ಎಂದರೆ ಅದು ಬೇಳೆ (ದಾಲ್). ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ಮಸೂರ್ ದಾಲ್ ಹೀಗೆ ಯಾವುದಾದರೂ ಒಂದು ರೂಪದಲ್ಲಿ ಬೇಳೆ ನಮ್ಮ ತಟ್ಟೆಯನ್ನು ಅಲಂಕರಿಸುತ್ತದೆ. ಆದರೆ, ಪ್ರತಿದಿನವೂ ನಿಯಮಿತವಾಗಿ ದಾಲ್ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ, ಸ್ನಾಯುಗಳು ಹಾಗೂ ಒಟ್ಟಾರೆ ಆರೋಗ್ಯದ ಮೇಲಾಗುವ ಅದ್ಭುತ ಪರಿಣಾಮಗಳೇನು ಎಂಬುದನ್ನು ತಿಳಿಯೋಣ.
ಸುಲಭ ಜೀರ್ಣಕ್ರಿಯೆ
ಬೇಳೆಯಲ್ಲಿ ನೈಸರ್ಗಿಕವಾಗಿ ಸಾಕಷ್ಟು ನಾರಿನಂಶ ಇರುತ್ತದೆ. ದಿನವೂ ದಾಲ್ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮ ಆಹಾರವಾಗಿದೆ. ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದಿನನಿತ್ಯದ ಬೇಳೆ ಸೂಪ್ ಅಥವಾ ಸಾರು ಉತ್ತಮ ಪರಿಹಾರ.
ಪ್ರೋಟೀನ್ ಶಕ್ತಿ
ಸಸ್ಯಾಹಾರಿಗಳಿಗೆ ಬೇಳೆಯೇ ಪ್ರೋಟೀನ್ನ ಪ್ರಮುಖ ಆಸರೆ. ಸ್ನಾಯುಗಳ ಪುನರುಜ್ಜೀವನ, ಬಲವರ್ಧನೆ ಮತ್ತು ದೇಹದ ಅಂಗಾಂಶಗಳ ದುರಸ್ತಿಗೆ ಪ್ರೋಟೀನ್ ಅತ್ಯಗತ್ಯ. ಪ್ರತಿದಿನ ದಾಲ್ ಸೇವನೆಯು ಸ್ನಾಯುಗಳು ಕರಗದಂತೆ ಕಾಯುತ್ತದೆ. ಬೇಳೆಯನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಸೇರಿಸಿ ತಿಂದಾಗ ದೇಹಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಮೈನೋ ಆಸಿಡ್ಗಳು ದೊರೆತು ಸ್ನಾಯುಗಳಿಗೆ ಪೂರ್ಣ ಪ್ರಮಾಣದ ಶಕ್ತಿ ಸಿಗುತ್ತದೆ.
ಬೇಳೆಯಲ್ಲಿರುವ ಫೋಲೇಟ್, ಮ್ಯಾಗ್ನಿಷಿಯಂ ಮತ್ತು ನಾರಿನಂಶವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದರಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ದಿನವಿಡೀ ದೇಹಕ್ಕೆ ಸುದೀರ್ಘ ಶಕ್ತಿಯನ್ನು ನೀಡುತ್ತದೆ ಹಾಗೂ ಬೇಗನೆ ಹಸಿವಾಗದಂತೆ ತಡೆಯುತ್ತದೆ.
ಇದರ ಲೋ ಗ್ಲೈಸೆಮಿಕ್ ಇಂಡೆಕ್ಸ್ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ದಿಢೀರ್ ಏರದಂತೆ ತಡೆಯುತ್ತದೆ.
ಪ್ರತಿದಿನ ವಿಧವಿಧದ ಬೇಳೆಗಳನ್ನು ಬದಲಾಯಿಸುತ್ತಾ (ತೊಗರಿ, ಹೆಸರು, ಮಸೂರ್ ಇತ್ಯಾದಿ), ಸರಿಯಾದ ಪ್ರಮಾಣದಲ್ಲಿ ತಿಂದರೆ ಬೇಳೆಯು ನಮ್ಮ ದೇಹಕ್ಕೆ ಸಿಗುವ ಅತ್ಯಂತ ಅಗ್ಗದ ಮತ್ತು ಪೌಷ್ಟಿಕ ದೇಸಿ ’ಸೂಪರ್ ಫುಡ್’.



