ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಚಾಪೆಲ್ ಹಿಲ್ನಲ್ಲಿರುವ ನಾರ್ತ್ ಕೆರೊಲಿನಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅಧ್ಯಾಪಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಮಧ್ಯಾಹ್ನ ವಿವಿಯ ಕೌಡಿಲ್ ಪ್ರಯೋಗಾಲಯದಲ್ಲಿ ಗುಂಡು ಹಾರಿಸಲಾಗಿದ್ದು, ವಿವಿ ಚಾನ್ಸೆಲರ್ ಕೆವಿನ್ ಗುಸ್ಕಿವಿಕ್ಜ್ ಅಧ್ಯಾಪಕರನ್ನು ಶೂಟ್ ಮಾಡಿದ ಶಂಕಿತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಶಂಕಿತನ ಮತ್ತು ಅಧ್ಯಾಪಕರ ಹೆಸರುಗಳನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಯುಎನ್ಸಿ ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಜೇಮ್ಸ್ ಸೋಮವಾರ ರಾತ್ರಿ ಹೇಳಿಕೆ ನೀಡಿದ್ದು, ಹತ್ಯೆಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ಸಮಯಬೇಕಾಗಬಹುದು. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಮಂಗಳವಾರದಂದು ತರಗತಿಗಳು ಮತ್ತು ಕ್ಯಾಂಪಸ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಸುಮಾರು 32,000 ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ 4,000 ಅಧ್ಯಾಪಕರು ಮತ್ತು 9,000 ಸಿಬ್ಬಂದಿ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.