ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾರಿ ವಿವಾದಕ್ಕೆ ಸಂಬಂಧಿಸಿ ಉಂಟಾದ ವೈಷಮ್ಯ ನೆರೆಹೊರೆಯ ಸಂಬಂಧಿಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ದಕ್ಷಿಣ ಕಾನಂದ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಆಲಂತಾಯ ಗ್ರಾಮದ ಪೆರ್ಲ ನಿವಾಸಿ ರಮೇಶ್ ಗೌಡ (೫೧) ಎಂಬವರು ಕೊಲೆಯಾದ ದುರ್ದೈವಿಯಾಗಿದ್ದು, ಅವರ ಮನೆ ಸಮೀಪದ ನಿವಾಸಿ ದೂರದ ಸಂಬಂಧಿಯೂ ಆಗಿರುವ ಹರೀಶ್ ಗೌಡ(೩೮) ಕೊಲೆಗೈದ ಆರೋಪಿಯಾಗಿದ್ದಾನೆ.
ಇಬ್ಬರೊಳಗೆ ದಾರಿಗೆ ಸಂಬಂಧಿಸಿ ಶುಕ್ರವಾರ ಬೆಳಗ್ಗಿನಿಂದಲೇ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದ್ದು, ಇದು ವಿಕೋಪಕ್ಕೆ ತಿರುಗಿ ಕೊಲೆಗೈಯುವ ಹಂತಕ್ಕೆ ತಲುಪಿತ್ತೆಂದು ಹೇಳಲಾಗಿದೆ.
ದೇವಾಲಯಕ್ಕೆ ಹೊರಟವರನ್ನು ಕಡಿದು ಕೊಲೆಗೈದ
ಪೆರ್ಲ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆಯುವ ಭಜನಾ ಸೇವೆಯಲ್ಲಿ ಭಾಗವಹಿಸುವ ಸಲುವಾಗಿ ಹೂವುಗಳನ್ನು ಸಂಗ್ರಹಿಸಿ ಬೈಕ್ ನಲ್ಲಿ ಮನೆಯಿಂದ ಹೊರಟು ೫೦ ಮೀಟರ್ ದೂರದ ರಸ್ತೆಗೆ ಸಂಧಿಸಿದಾಕ್ಷಣ ಯಮಸ್ವರೂಪಿಯಂತೆ ಹೊಂಚು ದಾಳಿ ನಡೆಸಿದ ಹರೀಶ ಗೌಡ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾನೆ.
ಹಲ್ಲೆಗೀಡಾದ ರಮೇಶ ರವರು ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ೨೦೦ ಮೀಟರ್ ನಷ್ಟು ದೂರ ಬೆನ್ನಟ್ಟಿ ಕಡಿದು ಕೊಂದಿರುವ ಸ್ಥಿತಿ ಕಂಡು ಬಂದಿದೆ. ಮನೆ ಸಮೀಪ ಬೈಕ್ ಬಿದ್ದಿದ್ದರೆ, ಬೈಕಿನಿಂದ ಸುಮಾರು ೨೦೦ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಹಂತಕ ಆರೋಪಿ ಹರೀಶ್ ಪರಾರಿಯಾಗಿದ್ದಾನೆ.
ಉಪ್ಪಿನಂಗಡಿ ಎಸೈ ಅವಿನಾಶ್ ಮತ್ತಿತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.