October 14, 2026
Wednesday, October 14, 2026
spot_img

ಆಟವಾಡುತ್ತಿದ್ದ ಬಾಲಕನ ಮೇಲೆ ಹುಚ್ಚುನಾಯಿ ದಾಳಿ: ತುಟಿ, ಮೂಗಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಮಂಡ್ಯ:

ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚಿ ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಂಕರ ಎಂಬುವರ ಪುತ್ರ ಮನ್ವಿತ್‌ಗೌಡ (8) ಎಂಬಾತನೇ ಹುಚ್ಚಿ ನಾಯಿ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಬಾಲಕ.

ತುಟಿಯನ್ನು ಕಚ್ಚಿ ಎಳೆದ ನಾಯಿ

ಭಾನುವಾರ ಮಧ್ಯಾಹ್ನ ಸಮಯದಲ್ಲಿ ಮನೆಯ ಮುಂದೆ ತನ್ನ ಸ್ನೇಹಿತರೊಡನೆ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಹಠಾತ್ತನೆ ಬಂದ ಹುಚ್ಚುನಾಯಿ ಆತನ ಮೇಲೆ ದಾಳಿ ಮಾಡಿದೆ. ಇದನ್ನು ಕಂಡ ಇತರೆ ಹುಡುಗರು ಮನೆ ಕಡೆಗೆ ಓಡಿದ್ದಾರೆ. ಮನ್ವಿತ್‌ಗೌಡನ ಎರಡೂ ತುಟಿಗಳನ್ನು ಕಚ್ಚಿ ಎಳೆದಿರುವುದರಿಂದ ತುಟಿಗಳಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಮೂಗನ್ನೂ ಕಚ್ಚಿ ಎಳೆದು ಗಾಯಗೊಳಿಸಿದೆ. ಬಾಲಕನ ಚೀರಾಟ ಕೇಳಿ ಪೋಷಕರು ತಕ್ಷಣ ಬಂದು ನಾಯಿಯನ್ನು ಓಡಿಸಿ ಬಾಲಕನನ್ನ ಮಿಮ್ಸ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಗೆ ವೈದ್ಯರು ಸಹಕಾರ ನೀಡದ ಕಾರಣ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನ್ವಿತ್‌ಗೌಡನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೊದಲು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಅವಧಿ ಮುಗಿದ ನಂತರ ಪ್ಲಾಸ್ಟಿಕ್ ಸರ್ಜರಿ ಮೂಲಕ ತುಟಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಮನೆಗಳಲ್ಲಿ ಸಾಕು ನಾಯಿಗಳ ಮೇಲೂ ದಾಳಿ ಮಾಡಿರುವ ಹುಚ್ಚು ನಾಯಿ ಅವುಗಳಿಗೂ ಕಚ್ಚಿ ಗಾಯಗೊಳಿಸಿದೆ. ಮಗುವಿನ ಮೇಲೆ ದಾಳಿ ನಡೆಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

Must Read