August 5, 2026
Wednesday, August 5, 2026
spot_img

ಟೆಸ್ಟ್, ಒಡಿಐ, ಟಿ20ಯಲ್ಲಿ ಅಪರೂಪದ ಮೈಲಿಗಲ್ಲು: ಕ್ರಿಕೆಟ್ ಜಗತ್ತಿನಲ್ಲಿ ರಾರಾಜಿಸಿದ ಬಾಬರ್ ಹೆಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ್ ಟೆಸ್ಟ್ ತಂಡದ ಸಾರಥಿ ಬಾಬರ್ ಆಝಂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಹಾಗೂ ಅಪರೂಪದ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕ್ರಿಕೆಟ್‌ನ ಮೂರೂ ಸ್ವರೂಪಗಳಾದ ಟೆಸ್ಟ್, ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಈ ಅದ್ಭುತ ಸಾಧನೆ ಮಾಡಿದ್ದಾರೆ.

ಟ್ರಿನಿಡಾಡ್ ಟೆಸ್ಟ್‌ನಲ್ಲಿ ಮೈಲಿಗಲ್ಲು

ಟ್ರಿನಿಡಾಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬಾಬರ್ ಆಝಂ ಜವಾಬ್ದಾರಿಯುತ ಆಟವಾಡಿ 88 ರನ್ ಕಲೆಹಾಕಿದರು. ಈ ಪ್ರದರ್ಶನದೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4,500 ರನ್‌ಗಳ ಗಡಿಯನ್ನುಶಸ್ತ್ರವಾಗಿ ದಾಟಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಸ್ವರೂಪಗಳಲ್ಲಿ ತಲಾ 4,500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಹಾಗೂ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಕದಿನ ಹಾಗೂ ಟಿ20ಯಲ್ಲಿ ಭರ್ಜರಿ ಸಾಧನೆ

ಏಕದಿನ ಕ್ರಿಕೆಟ್‌ನಲ್ಲಿ ಬಾಬರ್ ಆಝಂ 140 ಇನಿಂಗ್ಸ್‌ಗಳನ್ನು ಆಡಿದ್ದು, ಒಟ್ಟು 7,562 ಎಸೆತಗಳನ್ನು ಎದುರಿಸಿ 6,626 ರನ್ ಗಳಿಸಿದ್ದಾರೆ. ಇದರಲ್ಲಿ 20 ಶತಕಗಳು ಹಾಗೂ 38 ಅರ್ಧಶತಕಗಳು ಸೇರಿವೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ವಿಭಾಗದಲ್ಲಿ 136 ಇನಿಂಗ್ಸ್‌ಗಳಿಂದ 3,590 ಎಸೆತಗಳನ್ನು ಎದುರಿಸಿ 4,596 ರನ್ ಪೇರಿಸಿದ್ದಾರೆ. ಈ ಮೂಲಕ ಚೊಚ್ಚಲ ಸ್ಥಾನದಲ್ಲಿ ನಿಂತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ವಿಶ್ವದ ಅಗ್ರ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ

ಪಾಕಿಸ್ತಾನದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 117 ಇನಿಂಗ್ಸ್‌ಗಳನ್ನು ಪೂರ್ಣಗೊಳಿಸಿರುವ ಬಾಬರ್ ಆಝಂ, 4,500ಕ್ಕೂ ಅಧಿಕ ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸತತ ಶ್ರಮ, ಸ್ಥಿರ ಪ್ರದರ್ಶನ ಹಾಗೂ ಆಟದ ಮೇಲಿನ ಅಚಲ ನಿಷ್ಠೆಯಿಂದಾಗಿ ಬಾಬರ್ ಆಝಂ ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಮೂರೂ ಮಾದರಿಗಳಲ್ಲಿ ತಲಾ 4500+ ರನ್ ಬಾರಿಸಿರುವ ಏಕೈಕ ಆಟಗಾರನಾಗಿ ಹೊರಹೊಮ್ಮಿರುವುದು ಪಾಕಿಸ್ತಾನ್ ಕ್ರಿಕೆಟ್‌ಗೆ ಹಾಗೂ ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !