ಹೊಸದಿಗಂತ ವರದಿ ಬಳ್ಳಾರಿ:
ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರ ಹಾವುಗಳನ್ನು ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಕರಡಿಧಾಮ ಕಾಡಿನಲ್ಲಿ ಹಾಗೂ ಈ ಭಾಗದ ಗ್ರಾಮೀಣ ಅರಣ್ಯ ಪ್ರದೇಶದಲ್ಲಿ ನೋಡಬಹುದಾಗಿದ್ದು, ಇವುಗಳನ್ನು ಹಸಿರಾವು ಅಥವಾ ಬಳೆವಡುಕ ಎಂದು ಕರೆಯಲಾಗುತ್ತದೆ.
ಈ ಹಾವು ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಬಾರಿ ಮಳೆಯಿಲ್ಲದೇ ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಕಾಡು, ಮಳೆಯಿಲ್ಲದೆ ಒಣಗಿದೆ. ಆದರೆ, ಅಳಿವಿನಂಚಿನಲ್ಲಿರುವ ಸುಂದರವಾದ ಈ ಉರಗವನ್ನು ಗುಡೇಕೋಟೆ ಭಾಗದ ಬೆಟ್ಟ ಗುಡ್ಡಗಳ ತಂಪಾದ ಜಾಗಗಳಲ್ಲಿ, ಹಸಿರಿನ ಬಳ್ಳಿಗಳಲ್ಲಿ, ಕಕ್ಕೆಗಿಡಗಳಲ್ಲಿ ಇದೀಗ ನೋಡಬಹುದಾಗಿದೆ.
ಬ್ಯಾಂಬೋ ಪಿಟ್ ವೈಪರ್ ಹಾವಿನ ವಿಶೇಷತೆ:
ತಲೆ ಮೇಲೆ ಬಿದ್ದ ನೀರನ್ನು ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದಾಗಿದ್ದು, ಇದು ಈ ಹಾವಿನ ವಿಶೇಷತೆಯಾಗಿದೆ. ಹೆಚ್ಚಾಗಿ ಇದು ಬಂಡೆಗಳ ಕೆಳಗೆ, ಹಸಿರಿನ ಬಳ್ಳಿಗಳಲ್ಲಿ, ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ. ಈ ಬ್ಯಾಂಬೋ ಪಿಟ್ ವೈಪರ್ ಕಚ್ಚುವ ಹಾವಾಗಿದೆ. ಆದರೆ ಈ ಹಾವು ಕಚ್ಚಿದರೆ ಸಾಯುವುದಿಲ್ಲ. ಮತ್ತಿನಲ್ಲಿದ್ದು ಪ್ರಜ್ಞೆ ತಪ್ಪುತ್ತಾರಷ್ಟೇ.
ಈ ಅಪರೂಪದ ಹಾವಿನ ಸೌಂದರ್ಯ ಆಕರ್ಷಣೀಯ. ಅಳಿವಿನಂಚಿನಲ್ಲಿರುವ ಈ ಹಾವಿನ ಸಂತತಿ ಸಂರಕ್ಷಿಸಬೇಕಿದೆ ಎನ್ನುತ್ತಾರೆ ಉರಗ ಪ್ರೇಮಿ ವಿರುಪಾಪುರ ಬಸವನಗೌಡ್ರು.