Tuesday, January 13, 2026
Tuesday, January 13, 2026
spot_img

ಗವಿಗಂಗಾಧರೇಶ್ವರನಿಗೆ ಭಾಸ್ಕರ ನಮನ: ಜ.15ರಂದು ಸೂರ್ಯರಶ್ಮಿ ವಿಸ್ಮಯಕ್ಕೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಅತ್ಯಂತ ಪುರಾತನ ಹಾಗೂ ಪವಾಡ ಸದೃಶ ದೇವಾಲಯಗಳಲ್ಲಿ ಒಂದಾದ ಗವಿಪುರಂನ ಶ್ರೀ ಗವಿಗಂಗಾಧರೇಶ್ವರ ದೇಗುಲ, ಈ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು (ಜನವರಿ 15, ಗುರುವಾರ) ಅಪರೂಪದ ಸೂರ್ಯ ರಶ್ಮಿ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ.

ಪ್ರತಿ ವರ್ಷದಂತೆ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಈ ಪುಣ್ಯಕಾಲದಲ್ಲಿ, ಸೂರ್ಯನ ಕಿರಣಗಳು ನೇರವಾಗಿ ಗುಹಾಲಯದ ಒಳಗಿರುವ ಶಿವಲಿಂಗವನ್ನು ಸ್ಪರ್ಶಿಸಲಿವೆ. ಈ ಬಾರಿ ಸಂಜೆ 5:02 ರಿಂದ 5:04 ರವರೆಗೆ, ಅಂದರೆ ಸುಮಾರು ಎರಡು ನಿಮಿಷಗಳ ಕಾಲ ಸೂರ್ಯದೇವನು ಗಂಗಾಧರೇಶ್ವರನಿಗೆ ಕಿರಣಗಳ ಮೂಲಕ ಪೂಜೆ ಸಲ್ಲಿಸಲಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿದ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಅವರು, “ಲಿಂಗದ ಮೇಲೆ ಸೂರ್ಯರಶ್ಮಿ ಎರಡು ನಿಮಿಷಗಳ ಕಾಲ ನೆಲೆಸುವುದು ಅತ್ಯಂತ ಶುಭ ಸಂಕೇತ. ಈ ಸೂರ್ಯ ಪೂಜೆಯ ಅವಧಿಯು ನಾಡಿನ ಸುಭಿಕ್ಷೆಯನ್ನು ಸೂಚಿಸುತ್ತದೆ,” ಎಂದು ತಿಳಿಸಿದ್ದಾರೆ.

ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಗರ್ಭಗುಡಿಯ ಒಳಗಿನ ದೃಶ್ಯವನ್ನು ಸ್ಪಷ್ಟವಾಗಿ ನೋಡಲು ದೇವಾಲಯದ ಹೊರಭಾಗದಲ್ಲಿ 2 ಬೃಹತ್ ಎಲ್‌ಇಡಿ ಪರದೆಗಳು ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಪ್ರಯುಕ್ತ ಗುರುವಾರ ರಾತ್ರಿ 11 ಗಂಟೆಯವರೆಗೆ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Most Read

error: Content is protected !!