ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಾಲಿವುಡ್ನ ಹಿರಿಯ ನಟ ಗೋವಿಂದ ಅವರ ಸಂಸಾರದ ಬಿರುಕು ಬಿದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವೆ ಬಿರುಕು ಮೂಡಿದ್ದು,ಇವರಿಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಗೋವಿಂದ ಮತ್ತು ಸುನೀತಾ ಅವರು ಮದುವೆ ಆಗಿ 37 ವರ್ಷ ಕಳೆದಿದೆ. ಇದೀಗ ಈ ದಂಪತಿ ನಡುವೆ ಈಗ ಕಿರಿಕ್ ಶುರುವಾಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ ದಂಪತಿ ಕಡೆಯಿಂದ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ನಡುವೆ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಗೋವಿಂದ ಅವರು ಮರಾಠಿ ನಟಿಯೊಬ್ಬರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದಲೇ ಸುನೀತಾ ಅವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಹರಡಿದೆ.
ಒಂದು ಸಂದರ್ಶನದಲ್ಲಿ ಸುನೀತಾ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದರು. ‘ನಮಗೆ ಎರಡು ಮನೆ ಇದೆ. ನಮ್ಮ ಅಪಾರ್ಟ್ಮೆಂಟ್ ಎದುರು ನಮ್ಮದೇ ಒಂದು ಬಂಗಲೆ ಇದೆ. ನಾನು ಫ್ಲಾಟ್ನಲ್ಲಿ ಮಕ್ಕಳ ಜೊತೆ ಇರುತ್ತೇನೆ. ಅವರು (ಗೋವಿಂದ) ಬಂಗಲೆಯಲ್ಲಿ ಇರುತ್ತಾರೆ. ಅವರ ಮೀಟಿಂಗ್ ಮುಗಿಯುವುದು ತಡ ಆಗುತ್ತದೆ. ಅವರಿಗೆ ಮಾತನಾಡುವುದು ಎಂದರೆ ತುಂಬ ಇಷ್ಟ. 10 ಜನರನ್ನು ಸೇರಿಸಿಕೊಂಡು ಮಾತನಾಡುತ್ತಾ ಇರುತ್ತಾರೆ’ ಎಂದು ಸುನೀತಾ ಅವರು ಹೇಳಿದ್ದರು.
ಒಟ್ಟ ಕೆಲವು ತಿಂಗಳ ಹಿಂದೆಯೇ ಸುನೀತಾ ಅವರು ಗೋವಿಂದಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೆ ಇನ್ನೂ ಗೋವಿಂದ ಅವರು ಪ್ರತಿಕ್ರಿಯೆ ನೀಡಿದಂತಿಲ್ಲ.