ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಟ್ಯಾಂಕರ್‌ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು ಉಕ್ರೇನಿಯನ್ ಸೈನಿಕರೊಬ್ಬರು ತನ್ನನ್ನು ತಾನೇ ಸ್ಫೋಟಿಸಿಕೊಂಡು ಪ್ರಾಣತ್ಯಾಗ ಮಾಡಿದ್ದಾರೆ.
ಪ್ರಸ್ತುತ ರಷ್ಯಾ ಆಕ್ರಮಿಸಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆ ಸ್ಫೋಟಿಸುವ ನಿರ್ಧಾರ ಮಾಡಲಾಯಿತು. ಉಕ್ರೇನ್ ಮಿಲಿಟರಿ ಹೇಳಿಕೆ ಪ್ರಕಾರ ರಷ್ಯಾದ ಟ್ಯಾಂಕರ್‌ಗಳು ಆಕ್ರಮಣ ಮಾಡಿದಾಗ ಮೆರೈನ್ ಬೆಟಾಲಿಯನ್ ಇಂಜಿನಿಯರ್ ಆಗಿದ್ದ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆಗೆ ನಿಯೋಜಿಸಲಾಗಿತ್ತು.
ರಷ್ಯದ ಟ್ಯಾಂಕರ್‌ಗಳನ್ನು ತಡೆಯುವ ಏಕೈಕ ಮಾರ್ಗ ಎಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೇನೆ ನಿರ್ಧರಿಸಿತ್ತು. ಆಗ ವೊಲೊಡಿಮಿರೊವಿಚ್ ಈ ಕಾರ್ಯ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿದ್ದಾರೆ.
ಸೇತುವೆಯನ್ನು ಸ್ಫೋಟಿಸಿ ತಕ್ಷಣ ಮರಳಿ ಬರಲು ಸಾಧ್ಯ ಇಲ್ಲ ಎನ್ನುವುದನ್ನು ವೊಲೊಡಿಮಿರೊವಿಚ್ ಅರಿತಿದ್ದರು. ಅದರಂತೆಯೇ ಪ್ರಾಣತ್ಯಾಗ ಮಾಡಿದರು. ಅವರ ಪರಾಕ್ರಮದಿಂದ ರಷ್ಯ ಪಡೆಗಳು ಸುತ್ತು ಮಾರ್ಗಗಳನ್ನು ಬಳಸುವುದು ಅನಿವಾರ್ಯವಾಯಿತು. ಇದರಿಂದ ಉಕ್ರೇನಿಯನ್ ಮಿಲಿಟರಿಗೆ ರಷ್ಯ ಸೈನಿಕರನ್ನು ಎದುರಿಸಲು ಮತ್ತಷ್ಟು ಸಮಯ ಸಿಕ್ಕಿತು ಎಂದು ವರದಿಯಲ್ಲಿ ಹೇಳಲಾಗಿದೆ.