ನದಿ ದಾಟುವಾಗ ಕೊಚ್ಚಿ ಹೋದ ಭಕ್ತರು: ಓರ್ವ ಮಹಿಳೆ ಶವ ಪತ್ತೆ

ದಿಗಂತ ವರದಿ ರಾಮನಗರ:

ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಮಹದೇಶ್ವರನ ಕೆಲವು ಭಕ್ತರು ಕಾಲ್ನಡಿಗೆಯಲ್ಲಿ ಕಾವೇರಿ ನದಿ ದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದು, ಬಹುತೇಕರನ್ನು ರಕ್ಷಿಸಲಾಗಿದೆ. ಆದರೆ, ನದಿ ಪಾತ್ರದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಈ ಭಾಗದ ಭಕ್ತರು ಶಿವರಾತ್ರಿ ಅಂಗವಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವ ವಾಡಿಕೆ ಇದೆ. ಅದರಂತೆ ಗುರುವಾರ ಸಂಜೆ ಪಾದಯಾತ್ರಿಗಳು ಸಂಗಮದಲ್ಲಿ ಕಾವೇರಿ ನದಿ ದಾಟುತ್ತಿದ್ದ ವೇಳೆ ನೀರಿನ ಪ್ರವಾಹ ಹೆಚ್ಚಾಗಿ, ರಕ್ಷಣೆಗೆಂದು ಕಟ್ಟಿದ್ದ ಹಗ್ಗ ಆಚೀಚೆ ಆಗಿ ಹತ್ತಾರು ಮಂದಿ ಕೊಚ್ಚಿ ಹೋಗುತ್ತಿದ್ದರು. ಪಕ್ಕದಲ್ಲೇ ಇದ್ದವರು ಕೆಲವರನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಕೆಲವರು ಅಕ್ಕಪಕ್ಕದ ಮರಗಿಡಗಳನ್ನು ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೂ ಕೆಲವರು ನೀರಿನಲ್ಲಿ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ನಡೆದ ಸ್ಥಳವು ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದ್ದು, ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಧಾರ್ಮಿಕ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾಲ್ನಡಿಗೆಗೆ ಅವಕಾಶ ನೀಡುತ್ತಾ ಬಂದಿದ್ದಾರೆ.
ನದಿ ದಾಟುವಾಗ ಯಾವುದೇ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಕಾಡಿನಲ್ಲಿ ಸಾಗುವಾಗ ವನ್ಯಜೀವಿಗಳ ದಾಳಿಯ ಅಪಾಯವೂ ಇದೆ. ಹೀಗಿದ್ದೂ ಧಾರ್ಮಿಕ ಕಾರಣಕ್ಕೆ ಕಾಲ್ನಡಿಗೆಗೆ ಯಾವುದೇ ಅಡ್ಡಿ ಮಾಡಿಲ್ಲ. ಈವರೆಗೆ ಇಂತಹ ಘಟನೆ ನಡೆದಿರಲಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.
ನದಿಯಲ್ಲಿ ನೀರಿನ ಹರಿವು ಏಕಾಏಕಿ ಏರಿಕೆಯಾಗಿ ಈ ಅನಾಹುತಕ್ಕೆ ಕಾರಣ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಹುತೇಕರನ್ನು ರಕ್ಷಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!