ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಈಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಗಂಟೆಗಟ್ಟಲೆ ಟ್ರಾಫಿಕ್ ಜಾಂಮ್ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬ, ರಸ್ತೆ ಮಧ್ಯೆ ಕೈಯಲ್ಲಿ ಪಿಸ್ತೂಲ್ ಹಿಡಿದು ಜನರಲ್ಲಿ ಭೀತಿ ಮೂಡಿಸಿ ದಾರಿ ತೆರವು ಮಾಡಿಸಿಕೊಂಡ ಘಟನೆ ವೈರಲ್ ಆಗಿದೆ.
ಸಹದತ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಬ್ ಗಂಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲಾಗಿ ನಿಂತಿದ್ದ ವೇಳೆ, ಸಿಟ್ಟಿಗೆದ್ದ ವ್ಯಕ್ತಿ ತನ್ನ ವಾಹನದಿಂದ ಇಳಿದು ಕೈಯಲ್ಲಿ ಗನ್ ಹಿಡಿದು ರಸ್ತೆ ಮಧ್ಯೆ ನಡೆಯತೊಡಗಿದ್ದಾನೆ. ಆತನನ್ನು ಕಂಡು ಚಾಲಕರು ಮತ್ತು ಸಾರ್ವಜನಿಕರು ಆತಂಕಗೊಂಡು ತಕ್ಷಣ ದಾರಿ ಬಿಡುತ್ತಿದ್ದಂತೆ, ಕೆಲವೇ ನಿಮಿಷಗಳಲ್ಲಿ ಭಾರೀ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ಇದನ್ನೂ ಓದಿ:
ಈ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.
ಆದರೆ ತನಿಖೆಯಲ್ಲಿ ದೊಡ್ಡ ಟ್ವಿಸ್ಟ್ ಬೆಳಕಿಗೆ ಬಂದಿದೆ. ಆತ ತೋರಿಸಿದ್ದದ್ದು ನಿಜವಾದ ಪಿಸ್ತೂಲ್ ಅಲ್ಲ, ಬಂದೂಕಿನ ಆಕಾರದಲ್ಲಿದ್ದ ಲೈಟರ್ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಟ್ರಾಫಿಕ್ ತೆರವು ಮಾಡಿಸಿದ ಈ ನಡೆ ಗಂಭೀರ ಅಪರಾಧವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ. ಸ್ಥಳೀಯರು ಈ ಘಟನೆಯನ್ನು ‘ಟ್ರಾಫಿಕ್ ಕಿರಿಕಿರಿಗೆ ಹುಚ್ಚಾಟದ ಪರಿಹಾರ’ ಎಂದು ಟೀಕಿಸುತ್ತಿದ್ದಾರೆ.



