ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಲಲಾ ಮೂರ್ತಿಯ ಕೆತ್ತನೆಯ ಮೂಲಕ ವಿಶ್ವಪ್ರಸಿದ್ಧರಾಗಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ದೇಶದ ಮೊದಲ ವಾಲ್ಮೀಕಿ ಮೂರ್ತಿ ಈಗ ಬಳ್ಳಾರಿ ನಗರಕ್ಕೆ ಆಗಮಿಸಿದೆ. ಜನವರಿ 3ರಂದು ನಗರದ ವಾಲ್ಮೀಕಿ ವೃತ್ತದಲ್ಲಿ ಈ ಭವ್ಯ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ನಗರಕ್ಕೆ ಆಗಮಿಸಿದ ಮೂರ್ತಿಯನ್ನು ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ವಾದ್ಯಮೇಳ ಹಾಗೂ ಜನಪದ ಕಲಾತಂಡಗಳು ಮೆರವಣಿಗೆಗೆ ಕಳೆ ತಂದವು. ವಿಶೇಷವಾಗಿ ರಾಮ ಮತ್ತು ಆಂಜನೇಯನ ವೇಷಭೂಷಣ ತೊಟ್ಟ ಯುವಕರು ಮೆರವಣಿಗೆಯ ಉದ್ದಕ್ಕೂ ಜನರ ಗಮನ ಸೆಳೆದರು.
ಸ್ಥಳೀಯ ಶಾಸಕ ನಾರಾ ಭರತ್ ರೆಡ್ಡಿ ಅವರು ತಮ್ಮ ವೈಯಕ್ತಿಕವಾಗಿ ಸುಮಾರು 1.10 ಕೋಟಿ ರೂಪಾಯಿ ವೆಚ್ಚ ಭರಿಸಿ ಈ ಸುಂದರ ಮೂರ್ತಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಅರುಣ್ ಯೋಗಿರಾಜ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಈ ಮೂರ್ತಿಯನ್ನು ಅದ್ಭುತವಾಗಿ ಕೆತ್ತಿದ್ದಾರೆ.
ಜ. 3ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ವಾಲ್ಮೀಕಿ ಸಮಾಜದ ಪ್ರಮುಖ ಶಾಸಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಸಕ ಭರತ್ ರೆಡ್ಡಿ ಮಾಹಿತಿ ನೀಡಿದ್ದಾರೆ.

