ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮದ ಹೆಸರಿನಲ್ಲಿ ಕೇರಳದಲ್ಲಿ ಐಎಎಸ್ ಅಧಿಕಾರಿಗಳದ್ದೇ ಪ್ರತ್ಯೇಕ ವಾಟ್ಸ್ಆ್ಯಪ್ ಗ್ರೂಪ್ ರಚನೆಯಾಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ತಮ್ಮ ವೈಯಕ್ತಿಕ ವಾಟ್ಸ್ಆ್ಯಪ್ ಸಂಖ್ಯೆಯನ್ನು ಹ್ಯಾಕ್ ಮಾಡಿ, ಒಂದು ಧರ್ಮದ ಹೆಸರಿನಲ್ಲಿ ಗ್ರೂಪ್ ರಚಿಸಲಾಗಿದೆ ಎಂದು ಐಎಎಸ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಕೇರಳ ಸರ್ಕಾರ ತನಿಖೆಗೆ ಮುಂದಾಗಿದೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕೈಗಾರಿಕಾ ಸಚಿವ ಪಿ. ರಾಜೀವ್ ಅವರು, ‘ಒಂದು ಧರ್ಮದ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳದ್ದೇ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿರುವ ವಿವಾದ ಕೇಳಿ ಬಂದಿದೆ. ಘಟನೆಯನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತನಿಖೆಗೆ ಒಳಪಡಿಸಲಾಗುವುದು’ ಎಂದರು.
ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಕಳವಳಕಾರಿ ಸಂಗತಿ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕ ಆಡಳಿತ ಇಲಾಖೆ ಅಡಿಯಲ್ಲಿ ಬರುವ ಐಎಎಸ್ ಅಧಿಕಾರಿಗಳಿಗೆ ಸಾಮಾನ್ಯ ನೀತಿ ಸಂಹಿತೆ ಇದೆ. ಇದನ್ನು ಮೀರುವುದು ನಿಯಮಬಾಹಿರ. ಈ ಬಗ್ಗೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರೂಪ್ ರಚನೆಯಾಗಿದ್ದು ಹೇಗೆ?
ಐಎಎಸ್ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ವಾಟ್ಸ್ಆ್ಯಪ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಧರ್ಮದ ಹೆಸರಿನಲ್ಲಿ ಗುಂಪು ರಚಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ವಿವಾದ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಅವರು ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಲ್ಲಿ ಕೋರಿದ್ದಾರೆ.
ವಿವಾದಾತ್ಮಕ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ವಿವಿಧ ಸಮುದಾಯಗಳ ಅಧಿಕಾರಿಗಳನ್ನು ಸೇರಿಸಲಾಗಿದೆ. ಗುಂಪನ್ನು ಹಿಂದೂ ಸಮುದಾಯದ ಹೆಸರಿನಲ್ಲಿ ರಚಿಸಲಾಗಿದೆ ಎಂದು ಅಧಿಕಾರಿಯ ಆಪ್ತ ಮೂಲಗಳು ತಿಳಿಸಿವೆ. ಇದನ್ನು ಗಮನಿಸಿದ ಅಧಿಕಾರಿ ಕೂಡಲೇ ದೂರು ದಾಖಲಿಸಿಕೊಂಡು ಗ್ರೂಪ್ ವಿಸರ್ಜನೆ ಮಾಡಿದ್ದಾರೆ. ತಾವು ಯಾವುದೇ ಅಧಿಕಾರಿಗಳನ್ನು ವಿವಾದಿತ ಗ್ರೂಪಿಗೆ ಸೇರಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.