Saturday, January 24, 2026
Saturday, January 24, 2026
spot_img

ಲಕ್ಕುಂಡಿ ಭೂಗರ್ಭದಲ್ಲಿ ಅಚ್ಚರಿಗಳ ಸರಣಿ: 9ನೇ ದಿನಕ್ಕೆ ಕಾಲಿಟ್ಟ ಉತ್ಖನನ, ಪತ್ತೆಯಾಯ್ತು ಸಪ್ತ ಹೆಡೆಯ ನಾಗರಶಿಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐತಿಹಾಸಿಕ ನಗರಿ ಲಕ್ಕುಂಡಿಯಲ್ಲಿ ಭೂಮಿಯ ಒಡಲಾಳ ಅಗೆದಷ್ಟು ಇತಿಹಾಸದ ರಹಸ್ಯಗಳು ಬಿಚ್ಚಿಕೊಳ್ಳುತ್ತಿವೆ. ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ದಿನಕ್ಕೊಂದು ವಿಸ್ಮಯಕಾರಿ ವಸ್ತುಗಳು ಪತ್ತೆಯಾಗುತ್ತಿದ್ದು, ಇದೀಗ ವಿಜಯನಗರ ಅರಸರ ಕಾಲದ ಅಪರೂಪದ ‘ಸಪ್ತ ಹೆಡೆಯ ನಾಗರಕಲ್ಲಿನ ಶಿಲ್ಪ’ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.

ಲಕ್ಕುಂಡಿ ಗ್ರಾಮದ ನಿವಾಸಿ ಷಣ್ಮುಖಪ್ಪ ರವದಿ ಎಂಬುವವರ ಜಮೀನಿನಲ್ಲಿ ಈ ವಿಶಿಷ್ಟ ಶಿಲೆ ಪತ್ತೆಯಾಗಿದೆ. ಅತ್ಯಂತ ಆಕರ್ಷಕ ಕೆತ್ತನೆ ಹಾಗೂ ಅಲಂಕಾರಿಕ ವಿನ್ಯಾಸ ಹೊಂದಿರುವ ಈ ಶಿಲೆಯು 7 ಹೆಡೆಗಳನ್ನು ಹೊಂದಿದ್ದು, ಇದರ ಅಕ್ಕಪಕ್ಕದಲ್ಲಿ ತಲಾ 2 ಹೆಡೆಯಿರುವ 7 ಪುಟ್ಟ ಶಿಲೆಗಳೂ ಪತ್ತೆಯಾಗಿವೆ. ಮಣ್ಣಿನಲ್ಲಿ ಹೂತುಹೋಗಿದ್ದ ಈ ನಾಗರ ಶಿಲ್ಪವು ವಿಜಯನಗರ ಕಾಲದ್ದೆಂದು ಅಂದಾಜಿಸಲಾಗಿದ್ದು, ಜನರಲ್ಲಿ ಕುತೂಹಲದ ಜೊತೆಗೆ ಭಕ್ತಿಯನ್ನೂ ಮೂಡಿಸಿದೆ.

ಇಷ್ಟೇ ಅಲ್ಲದೆ, ಈ ಭಾಗದ ಹಳೆಯ ತೋಟದ ಬಾವಿಯೊಂದರಲ್ಲಿ ಮತ್ತಷ್ಟು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಸುಮಾರು 100 ವರ್ಷ ಹಳೆಯದಾದ ಈ ಬಾವಿಯ ಗೋಡೆಗಳನ್ನು ನಿರ್ಮಿಸುವಾಗ ದಾನ ಶಿಲೆ, ದ್ವಾರಪಾಲಕರ ಮೂರ್ತಿ ಹಾಗೂ ಬೋದಿಗೆ ಶಿಲೆಗಳನ್ನು ಬಳಸಿರುವುದು ಅಚ್ಚರಿಗೆ ಕಾರಣವಾಗಿದೆ. ಪೂರ್ವಜರು ಈ ಬೆಲೆಬಾಳುವ ಶಿಲೆಗಳ ಮೇಲೆ ಪ್ಲಾಸ್ಟಿಂಗ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ಪತ್ತೆಯಾದ ಶಿಲೆಗಳು ಚಾಲುಕ್ಯ, ರಾಷ್ಟ್ರಕೂಟ ಹಾಗೂ ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ಸಾರುತ್ತಿವೆ. ಹಳೆಯ ಮನೆಗಳು ಹಾಗೂ ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯರ ಕಾಲದ ಕಲೆ ಅಡಗಿರುವುದು ಪತ್ತೆಯಾಗಿದೆ.

9ನೇ ದಿನವೂ ಉತ್ಖನನ ಮುಂದುವರಿದಿದ್ದು, ಇಡ ರಾಜ್ಯದ ಕಣ್ಣು ಲಕ್ಕುಂಡಿಯತ್ತ ನೆಟ್ಟಿದೆ. ಲಕ್ಕುಂಡಿಯ ಪ್ರತಿ ಮಣ್ಣಿನ ಕಣದಲ್ಲೂ ಚರಿತ್ರೆ ಅಡಗಿದೆ ಎಂಬುದಕ್ಕೆ ಈ ಹೊಸ ಸಂಶೋಧನೆಗಳೇ ಸಾಕ್ಷಿ.

Must Read