ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೊಳ್ಳೆ ಹಾಡು ಇಡೀ ಸಿನಿಮಾವನ್ನು ಹೇಗೆ ಗೆಲ್ಲಿಸಬಹುದೋ ಅದೇ ರೀತಿ ಒಂದು ಕೆಟ್ಟ ಹಾಡು ಸಿನಿಮಾ ಕಲೆಕ್ಷನ್‌ಗೆ ಹೊಡೆತ ನೀಡಬಹುದು. ಇನ್ನೇನು ರಿಲೀಸ್‌ಗೆ ಸ್ವಲ್ಪ ಸಮಯ ಇರುವಂತೆ ಕೆಡಿ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ.
ನಟ ಹಾಗೂ ನಿರ್ದೇಶಕ ಪ್ರೇಮ್ ಬರೆದಿರುವ ಸರ್ಸೆ ಸೆರಗ ಸರ್ಸೆ ಹಾಡಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಂದಿಯಲ್ಲಿಯೂ ಈ ಹಾಡನ್ನು ಜನ ಕೇಳಿದ್ದು, ಇನ್ನೆಷ್ಟು ಕೆಳಮಟ್ಟಕ್ಕೆ ಇಳಿದು ಲಿರಿಕ್ಸ್ ಬರೀತೀರಿ ಎಂದು ಜನ ಗರಂ ಆಗಿದ್ದಾರೆ.
ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು ಐಟಂ ಹಾಡಾಗಿದ್ದು, ನೋರಾ ಫತೇಹಿ ಕುಣಿದಿದ್ದಾರೆ. ಸಂಜಯ್ ದತ್ ಸಹ ಹಾಡಿನಲ್ಲಿದ್ದಾರೆ. ನೋರಾ ಫತೇಹಿ ಮದ್ಯದ ಕುರಿತಾಗಿ ಹಾಡುವ ಹಾಡು ಅದಾಗಿದೆ ಆದರೆ ಹಾಡಿನಲ್ಲಿ ಸಾಕಷ್ಟು ದ್ವಂದ್ವಾರ್ಥಗಳಿವೆ. ಇದೇ ಕಾರಣಕ್ಕೆ ಇದೀಗ ಹಾಡು ವಿವಾದಕ್ಕೆ ಕಾರಣವಾಗಿದೆ.



