ದಿಗಂತ ವರದಿ ಕಲಬುರಗಿ:
ಹಿಂದು ಮಹಾಗಣಪತಿ ಸಮಿತಿ ಕಲಬುರಗಿ ವತಿಯಿಂದ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಬಾಲ ರಾಮನ ಅವತಾರದಲ್ಲಿರುವ ೬ ಅಡಿಯ ಎತ್ತರದ ಹಿಂದು ಮಹಾಗಣಪತಿ ಯನ್ನು ಶನಿವಾರ ವಿಶೇಷ ಪೂಜೆಗೈಯುವ ಮೂಲಕ ಅದ್ಧೂರಿಯಾಗಿ ಪ್ರತಿಷ್ಟಾಪನೆ ಮಾಡಲಾಯಿತು.
ಕಳೆದ ಜನೇವರಿ ೨೦೨೪ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ, ಅಯೋಧ್ಯೆಯ ಸವಿನೆನಪಿಗಾಗಿ ಈ ಬಾರಿಯ ಅಲಂಕಾರವನ್ನು ವಿಶೇಷವಾಗಿ ರಾಮ ಮಂದಿರ ಹಾಗೂ ಬಾಲರಾಮನ ರೂಪದಲ್ಲಿ ಹಿಂದು ಮಹಾಗಣಪತಿಯ ಪ್ರತಿಷ್ಟಾಪನೆ ಮಾಡಲಾಯಿತು.
ಇದಕ್ಕೂ ಮುನ್ನ ನಗರದ ಶರಣಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಭವ್ಯ ಬಾಲರಾಮನ ಅವತಾರದಲ್ಲಿರುವ ಹಿಂದು ಮಹಾಗಣಪತಿಯ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.
ಇಂದಿನಿಂದ ೨೧ ದಿನಗಳ ಕಾಲ ದಿನನಿತ್ಯ ಅರ್ಥಪೂರ್ಣವಾಗಿರುವ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಸಮಸ್ತ ಹಿಂದೂ ಬಾಂಧವರು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಮಿತಿಯ ಸಂಸ್ಥಾಪಕ, ಅಧ್ಯಕ್ಷ ನಾಗೇಂದ್ರ ಕಾಬಡೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಿಂದು ಮಹಾಗಣಪತಿ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸುರೇಶ್ ಟೆಂಗಳಿ, ಸಿದ್ದರಾಜ ಬಿರಾದಾರ, ಶೇಖರ ದೇವಾನಂದ, ಸುಮಂಗಲಾ ಚಕ್ರವರ್ತಿ, ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ನಿತೀನ ಗುತ್ತೇದಾರ್, ಉಮೇಶ್ ಪಾಟೀಲ್, ಹರ್ಷಾನಂದ ಗುತ್ತೇದಾರ್, ಶಿವಯೋಗಿ ನಾಗೇನಹಳ್ಳಿ ಸೇರಿದಂತೆ ಹಿಂದು ಮಹಾಗಣಪತಿ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.