ಚೀತಾಗಳಿಗೆ ಇನ್ನಷ್ಟು ಭದ್ರತೆ ನೀಡಲು ತಯಾರಾಗುತ್ತಿದೆ ʼಸ್ಪೆಷಲ್‌ ಡಾಗ್‌ ಸ್ಕ್ವಾಡ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಯೋಜನೆಯ ಭಾಗವಾಗಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಂದಿಳಿದಿರುವ ನಮೀಬಿಯಾದ ಚೀತಾಗಳಿಗೆ ಬಿಗು ಭದ್ರತೆ ಒದಗಿಸಲಾಗುತ್ತಿದೆ. ನಿರಂತರ ಕಣ್ಗಾವಲು, ಉಪಗ್ರಹ ಕೊರಳುಪಟ್ಟಿ ಸೇರಿದಂತೆ ಅವುಗಳ ವಿಶೇಷ ನಿಗಾ ಇಡಲಾಗಿದೆ. ಇದಲ್ಲದೇ ಹುಲಿ ಕಾರ್ಯಾಚರಣೆಯಲ್ಲಿ ಪಳಗಿರುವ ಎರಡು ಆನೆಗಳಿರುವ ಗಸ್ತು ತಂಡವೂ ಕಾರ್ಯ ನಿರ್ವಹಿಸಲಿದೆ.

ಇದಕ್ಕೆ ಮತ್ತೂ ಹೆಚ್ಚಿನ ಭದ್ರೆತೆಗೆ ಚಿಂತಿಸಲಾಗಿದ್ದು ಕಳ್ಳ ಬೇಟೆಗಾರರಿಂದ ಅವುಗಳನ್ನು ರಕ್ಷಿಸಲು ವಿಶೇಷ ಶ್ವಾನ ಪಡೆಯನ್ನು ನಿಯೋಜಿಸಲು ಯೋಜಿಸಲಾಗಿದ್ದು ಹರಿಯಾಣದ ಪಂಚಕುಲದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ರಾಷ್ಟ್ರೀಯ ನಾಯಿಗಳ ತರಬೇತಿ ಕೇಂದ್ರದಲ್ಲಿ ಜರ್ಮನ್‌ ಶೆಪರ್ಡ್‌ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಶ್ವಾನಗಳು ವಿಶೇಷ ಕಾರ್ಯಪಡೆಯ ಭಾಗವಾಗಿ ಕಾರ್ಯ ನಿರ್ವಹಿಸಲಿದ್ದು ವಿಶೇಷ ತರಬೇತಿ ಕೋರ್ಸ್‌ನಲ್ಲಿ ಹುಲಿಯ ಚರ್ಮ, ಮೂಳೆಗಳು, ಆನೆ ದಂತಗಳು, ಕೆಂಪು ಮರಳು ಮತ್ತು ಇತರ ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಪತ್ತೆಹಚ್ಚಲು ತರಬೇತಿ ನೀಡಲಾಗುತ್ತದೆ.

ಈ ನಾಯಿಗಳಿಗೆ ಐಟಿಬಿಪಿಯು ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಇಂಡಿಯಾ) ಸಹಯೋಗದೊಂದಿಗೆ ತರಬೇತಿ ಪಡೆಯುತ್ತಿವೆ ಎಂದು ಐಟಿಬಿಪಿಯ ಮೂಲ ತರಬೇತಿ ಕೇಂದ್ರದ ಐಜಿ ಈಶ್ವರ್ ಸಿಂಗ್ ದುಹಾನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಏಎನ್‌ಐ ವರದಿ ಮಾಡಿದೆ. 7 ತಿಂಗಳ ತರಬೇತಿ ವ್ಯಾಯಾಮದ ನಂತರ ಈ ಸ್ನಿಫರ್ ಡಾಗ್ಸ್ ಕಾರ್ಯಪಡೆಯು ಚೀತಾಗಳ ರಕ್ಷಣೆಗೆ ಹಾಜರಾಗಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!