ಹೊಸದಿಗಂತ ವರದಿ ಚನ್ನರಾಯಪಟ್ಟಣ
ಚನ್ನರಾಯಪಟ್ಟಣ: ತಾಲ್ಲೂಕಿನ ಗಡಿಭಾಗದ ಮೆಳ್ಳಹಳ್ಳಿ ಗ್ರಾಮದಲ್ಲಿ ಮನೆಗಳ್ಳತನ ಮಾಡಲು ಯತ್ನಿಸಿದ ಖದೀಮನೊಬ್ಬನನ್ನು ಹಿಡಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬಲ್ಲವಳ್ಳಿ ಗ್ರಾಮದ ಪೃಥ್ವಿ ರಾಜ್ ಎಂಬಾತನೇ ಸಿಕ್ಕಿಬಿದ್ದಿರುವ ಕದೀಮ.
ಘಟನೆಯ ವಿವರ:
ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದ ಮೂಡಲ ಬೋರೆ ಪ್ರದೇಶದಲ್ಲಿ ಆನಂದ್ ಎಂಬವರ ತೋಟದ ಮನೆ ಇದ್ದು, ಅವರ ತಾಯಿ ಸೋಮವಾರ ಬೆಳಗ್ಗೆ 10:30 ರಲ್ಲಿ ಮನೆಗೆ ಬೀಗ ಹಾಕಿ ಅಲ್ಲಿಯೇ ಚಪ್ಪಲಿಗಳ ಕೆಳಗೆ ಕೀ ಇರಿಸಿ ಪಕ್ಕದ ಜಮೀನಿನಲ್ಲಿ ಜಾನುವಾರುಗಳನ್ನು ಮೇವಿಗೆ ಕಟ್ಟಲೆಂದು ತೆರಳಿದ್ದಾರೆ.
ನಂತರ 11 ಗಂಟೆ ಸುಮಾರಿನಲ್ಲಿ ಮನೆಯ ಬಳಿಗೆ ವಾಪಸ್ ಆಗಮಿಸಿದಾಗ ಮನೆ ಮುಂದೆ ದ್ವಿಚಕ್ರ ವಾಹನ ನಿಂತಿದ್ದು ಮನೆಯ ಬಾಗಿಲು ತೆರೆದುಕೊಂಡಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ಅಷ್ಟರಲ್ಲಿ ಪಕ್ಕದ ಜಮೀನಿನ ಶಿವರಾಜು ಎಂಬ ವ್ಯಕ್ತಿ ಕೆಲಸದ ಸಲುವಾಗಿ ಏಣಿ ಕೇಳಲೆಂದು ಬಂದಿದ್ದಾರೆ.
ಈ ಸಮಯದಲ್ಲಿ ಮನೆಯ ಒಳಗೆ ಯಾರೋ ಬಿರುವಿನ ಡೋರ್ ತೆಗೆಯುವ ಹಾಗೂ ಇತರೆ ವಸ್ತುಗಳನ್ನು ಬಿಸಾಡುತ್ತಿರುವ ಶಬ್ದ ಕೇಳಿ ಬಂದಿದೆ. ಇದರಿಂದ ಯಾರೂ ಕಳ್ಳತನ ಮಾಡುತ್ತಿರುವುದು ಖಚಿತವಾಗಿದ್ದು ಅಕ್ಕ ಪಕ್ಕದ ಜಮೀನಿನಲ್ಲಿ ವಾಸವಿರುವ ಸ್ಥಳೀಯರನ್ನು ಕೂಗಿದ್ದಾರೆ.
ಸ್ಥಳೀಯ ಐದಾರು ಮಂದಿ ಯುವಕರು ದೊಣ್ಣೆಗಳನ್ನು ಹಿಡಿದು ಮನೆಯೊಳಗೆ ಬೆಡ್ ರೂಮ್ಗೆ ಹೋದಾಗ ಖದೀಮ ಮೂಲೆಯಲ್ಲಿ ನಿಂತಿರುವುದನ್ನು ನೋಡಿ, ಆತನ ಕೈಗಳನ್ನು ಹಿಂಬದಿಯಾಗಿ ಕಟ್ಟಿ ಹೊರಗಡೆಗೆ ಕರೆ ತಂದಿದ್ದಾರೆ.
ಆತನ ಊರು ಹಾಗೂ ವಿಳಾಸವನ್ನು ವಿಚಾರಿಸಿದಾಗ ಆತ ನಾಗಮಂಗಲ ತಾಲ್ಲೂಕು ಬಲ್ಲವಳ್ಳಿ ಗ್ರಾಮದವನು ಎಂದು ತಿಳಿಸಿರುತ್ತಾನೆ. ದಯವಿಟ್ಟು ನನ್ನನ್ನು ಬಿಡಿ, ನನ್ನದು ಮೊಬೈಲ್ ಶಾಪ್ ಇದೆ, ಹೆಂಡತಿ ಇಬ್ಬರು ಮಕ್ಕಳಿದ್ದಾರೆ, ಮರ್ಯಾದೆ ಪ್ರಶ್ನೆ ಬಿಡಿ. ತಪ್ಪಾಯ್ತು… ತಪ್ಪಾಯ್ತು…., ನಾನು ತುಂಬಾ ಸಾಲ ಮಾಡಿಕೊಂಡಿದ್ದೇನೆ, ಹಾಗಾಗಿ ವಿಧಿ ಇಲ್ಲದೆ ಈ ಕೆಲಸ ಮಾಡಿದೆ. ಇದಕ್ಕೂ ಮೊದಲು ನಾನು ಎಲ್ಲಿಯೂ ಕಳ್ಳತನ ಮಾಡಿಲ್ಲ. ನಾನು ಹೊಸಬ, ಏನು ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ.
ಇದನ್ನೂ ಓದಿ:
ಸ್ಥಳೀಯರು ತಕ್ಷಣ ಹಿರೀಸಾವೆ ಪೊಲೀಸ್ ಠಾಣೆಗೆ ಕರೆ ಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಿರುತ್ತಾರೆ. ಪೊಲೀಸರು ಖದೀಮನನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ವಿಚಾರಗಳನ್ನು ಬಾಯಿ ಬಿಟ್ಟಿರುತ್ತಾನೆ. ಖದೀಮ ಪೃಥ್ವಿ ರಾಜ್ ಕದಬಹಳ್ಳಿ ಗ್ರಾಮದಲ್ಲಿ ಮೊಬೈಲ್ ಶಾಪ್ ಹೊಂದಿದ್ದು ಸಾಕಷ್ಟು ಸಂಪಾದನೆ ಮಾಡಿರುತ್ತಾನೆ. ಆದರೂ ಕಳ್ಳತನ ಮಾಡುವುದೇ ಈತನ ವೃತ್ತಿಯಾಗಿರುತ್ತದೆ. ಬೆಂಗಳೂರಿನ ವಿವಿದೆಡೆ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದು ಈತನ ಮೇಲೆ ಸಾಕಷ್ಟು ಪ್ರಕರಣಗಳು ಇರುವುದಾಗಿ ತಿಳಿದು ಬಂದಿದೆ.



