ಗುಜರಾತ್ ಕರಾವಳಿಯಲ್ಲೊಂದು ವಿಲಕ್ಷಣ ಘಟನೆ: ಸಮುದ್ರದಲ್ಲಿ ಮುಳುಗಿ ಸಿಂಹಿಣಿಯ ಸಾವು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮುದ್ರದಲ್ಲಿ ಮುಳುಗಿ ಸಿಂಹವೊಂದು ಸಾವನ್ನಪ್ಪಿದ ವಿಲಕ್ಷಣ ಘಟನೆ ಗುಜರಾತ್‌ನ ಆಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.

ಸುಮಾರು ಎಂಟು ವರ್ಷ ಪ್ರಾಯದ ಈ ಹೆಣ್ಣು ಸಿಂಹ ಆಮ್ರೇಲಿ ಜಿಲ್ಲೆಯ ಜಾಫ್ರಾಬಾದ್ ಅರಣ್ಯ ವಲಯದ ಧಾರಾ ಬಂದರ್ ಎಂಬ ಹಳ್ಳಿಯ ಕರಾವಳಿಯಲ್ಲಿ ದುರಂತ ಸಾವು ಕಂಡಿದೆ. ಈ ಘಟನೆಯನ್ನು ಜುನಾಗಢ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಖಚಿತಪಡಿಸಿದ್ದಾರೆ.

’ಸಮುದ್ರದಲ್ಲಿ ಮುಳುಗಿ ಸಿಂಹಗಳು ಮೃತಪಟ್ಟಿರುವ ಘಟನೆ ಈ ಹಿಂದೆಯೂ ನಡೆದಿವೆ. ಆದರೆ ಇದನ್ನು ಸಾಮನ್ಯ ಘಟನೆಯಾಗಿ ಪರಿಗಣಿಸುವುದಿಲ್ಲ. ಈ ಬಗ್ಗೆ ತನಿಖೆ ನಡೆಯಲಿದೆ. ’ಫೆ.೧೫ರ ಸಂಜೆ ಈ ಸಿಂಹಿಣಿಯ ಕಳೇಬರ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಶ್ವಾಸಕೋಶದಲ್ಲಿ ನೀರು ಸೇರಿ ಅದು ಮೃತಪಟ್ಟಿರುವುದು ಖಚಿತವಾಗಿದೆ. ಇನ್ನಷ್ಟು ಸ್ಪಷ್ಟ ಮಾಹಿತಿಗಾಗಿ ಸಿಂಹಿಣಿಯ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ಬೇಟೆಗಾರರ, ಕಳ್ಳಸಾಗಣೆದಾರರ ಕೈವಾಡ ಕಂಡು ಬಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ನಲ್ಲಿ ಸುಮಾರು ೩೦ ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ಗಿರ್ ಅರಣ್ಯ ಹರಡಿದ್ದು ಇಲ್ಲಿ ಸದ್ಯ ೬೭೪ ಏಷಿಯಾಟಿಕ್ ಸಿಂಹಗಳು ಇವೆ. ೨೦೨೨-೨೩ರಲ್ಲಿ ಒಟ್ಟು ೨೩೯ ಸಿಂಹಗಳು ಮೃತಪಟ್ಟಿವೆ. ಈ ಪೈಕಿ ೨೯ ಸಿಂಹಗಳು ಅಸಹಜವಾಗಿ ಮೃತಪಟ್ಟಿವೆ ಎಂದು ಗುಜರಾತ್ ಸರ್ಕಾರ ಇತ್ತೀಚೆಗಷ್ಟೇ ತಿಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!