ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಗೋಕುಲಂನಲ್ಲಿರುವ ಸಾಯಿ ಶ್ರೀನಿವಾಸ ಅಪಾರ್ಟ್‌ಮೆಂಟ್ ನಿವಾಸಿ ಗೌರಿ, ಮೃತ ವಿದ್ಯಾರ್ಥಿನಿ. ಓದುತ್ತಿದ್ದ ವಿದ್ಯಾರ್ಥಿನಿಗೆ ಬಲವಂತವಾಗಿ ಮದುವೆ ಮಾಡಲು ಯತ್ನಿಸಿದ್ದೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ವಿವರಕ್ಕೆ ಹೋಗುವುದಾದರೆ, ಈ ವಿದ್ಯಾರ್ಥಿನಿ ಇನ್ನೂ ಪದವಿ ಅಭ್ಯಾಸ ಮಾಡುತ್ತಿದ್ದು, ಈಕೆಯ ಹೆತ್ತವರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಈಗಲೇ ಮದುವೆ ಇಷ್ಟವಿಲ್ಲದ ಗೌರಿ, ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ ವರನನ್ನು ಹುಡುಕಿದ್ದಲ್ಲದೆ, ನಿನ್ನೆ ನಿಶ್ಚಿತಾರ್ಥ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮದುವೆ ತಪ್ಪಿಸಲು ಸಾಧ್ಯವೇ ಇಲ್ಲ ಎಂದು ಅರಿತ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ ತನಗೆ ಈ ಮದುವೆ ಇಷ್ಟವಿಲ್ಲ ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದರು.
ಬಳಿಕ ತಮ್ಮ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಗಂಭೀರ ಗಾಯಗಳಿಂದ ಗೌರಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿರುವುದಾಗಿ ಸತ್ಯಸಾಯಿ ಜನರಲ್ ಆಸ್ಪತ್ರೆ ವೈದ್ಯರು ತಿಳಿಸಿದರು. ವಿದ್ಯಾರ್ಥಿನಿ ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ವಿಷಯ ತಿಳಿದ ಪುಟ್ಟಪರ್ತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.