ಹೊಸದಿಗಂತ ವರದಿ, ಬಂಟ್ವಾಳ:
ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಮನೆ ಸಮೀಪದಲ್ಲಿರುವ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಕೋಕಲ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಕೋಕಲದ ನಿವಾಸಿ ಸಾಯಿ ಶಾಂತಿ( ಯಶೋಧರ)ಅವರ ಪುತ್ರ ಸುಮಂತ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಉಜಿರೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿ ಸಿ ಎ ಪದವಿ ವ್ಯಾಸಂಗ ಮಾಡುತ್ತಿದ್ದನು .
ಬೆಳಗ್ಗಿನ ಜಾವ ತೋಟಕ್ಕೆ ತೆರಳಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮನೆಮಂದಿ ಎದ್ದಾಗ ಸುಮಂತ್ ಮನೆಯಲ್ಲಿಲ್ಲದಿದ್ದು, ಶೌಚಾಲಯದ ನಳ್ಳಿಯಲ್ಲಿ ನೀರು ಸರಾಗವಾಗಿ ಹರಿಯುತಿತ್ತೆನ್ನಲಾಗಿದೆ.ಈತ ಶೌಚಾಲಯಕ್ಕೆ ಹೋಗಿರಬಹುದು ಎಂದು ಮನೆಯವರು ಭಾವಿಸಿದ್ದು,ತಡವಾದರೂ ಬಾರದೇ ಇದ್ದಾಗ ಮನೆಯವರು ಗಾಬರಿಯಿಂದ ಹುಡುಕಿದಾಗ ಮನೆ ಸಮೀಪದ ತೋಟದ ಬಾವಿಯ ದಡದಲ್ಲಿ ಆತನ ದೂರವಾಣಿ, ಚಪ್ಪಲ್, ಕನ್ನಡಕ ಪತ್ತೆಯಾಗಿದೆ.
ಯಾವುದೋ ಕಾರಣದಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.