ಹೊಸದಿಗಂತ ಉಳ್ಳಾಲ
ಬೇಸಿಗೆ ರಜೆಯ ಖುಷಿಯಲ್ಲಿದ್ದ ವಿದ್ಯಾರ್ಥಿಗಳ ತಂಡವೊಂದು ಕೆರೆಯಲ್ಲಿ ನೀರಾಟವಾಡಲು ಹೋದಾಗ ಸಂಭವಿಸಿದ ಅವಘಡದಲ್ಲಿ 17 ವರ್ಷದ ಬಾಲಕನೋರ್ವ ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಂಬ್ಲಮೊಗರು ಗ್ರಾಮದ ಖಂಡಿಲ ಎಂಬಲ್ಲಿ ನಡೆದಿದೆ.
ಅಂಬ್ಲಮೊಗರು ಗ್ರಾಮದ ಜರಿ ಹೌಸ್ ನಿವಾಸಿ, ರಿಕ್ಷಾ ಚಾಲಕ ಶಿವರಾಮ್ ಅವರ ಪುತ್ರ ಸೃಜನ್ (17) ಮೃತಪಟ್ಟ ದುರ್ದೈವಿ. ಈತ ಪ್ರಥಮ ಪಿಯುಸಿ ಪೂರೈಸಿದ್ದು, ಶನಿವಾರ ರಜೆ ಇದ್ದ ಕಾರಣ ತನ್ನ ಮೂವರು ಸ್ನೇಹಿತರೊಂದಿಗೆ ಖಾಸಗಿ ವಿವಿಗೆ ಸೇರಿದ ಜಮೀನಿನ ಕೆರೆಗೆ ಆಟವಾಡಲು ತೆರಳಿದ್ದನು. ಕೆರೆಯಲ್ಲಿ ನೀರಾಟವಾಡಿದ ನಂತರ, ಕೈಕಾಲು ತೊಳೆಯಲು ಪಕ್ಕದ ನಾಲೆಯೊಂದಕ್ಕೆ ಇಳಿದಾಗ ಸೃಜನ್ ಆಕಸ್ಮಿಕವಾಗಿ ಅಲ್ಲಿನ ಹೂಳಿನಲ್ಲಿ ಸಿಲುಕಿಕೊಂಡಿದ್ದಾನೆ.
ಸೃಜನ್ ಕೆಸರಿನಲ್ಲಿ ಸಿಲುಕುವುದನ್ನು ಕಂಡು ಆತನ ಸ್ನೇಹಿತನೊಬ್ಬ ರಕ್ಷಿಸಲು ಮುಂದಾಗಿದ್ದಾನೆ. ಆದರೆ ಆತನೂ ಸಹ ಕೆಸರಿನಲ್ಲಿ ಹೂತು ಹೋಗತೊಡಗಿದಾಗ, ಉಳಿದ ಗೆಳೆಯರು ಆತನನ್ನು ಎಳೆದು ರಕ್ಷಿಸಿದ್ದಾರೆ. ಆದರೆ ದುರದೃಷ್ಟವಶಾತ್ ಸೃಜನ್ ಕೆಸರಿನ ಅಡಿಯಲ್ಲೇ ನಾಪತ್ತೆಯಾಗಿದ್ದಾನೆ. ಘಟನೆಯಿಂದ ಭಯಭೀತರಾದ ಸ್ನೇಹಿತರು ಯಾರಿಗೂ ವಿಷಯ ತಿಳಿಸದೆ ಮನೆಗೆ ಮರಳಿದ್ದಾರೆ.
ರಾತ್ರಿ 8 ಗಂಟೆಯಾದರೂ ಸೃಜನ್ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಸ್ನೇಹಿತರನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ. ತಕ್ಷಣ ಅಗ್ನಿಶಾಮಕ ದಳ ಮತ್ತು ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಿರ್ಜನ ಪ್ರದೇಶವಾದ್ದರಿಂದ ಬೆಳಕಿನ ವ್ಯವಸ್ಥೆ ಇಲ್ಲದೆ ಶೋಧ ಕಾರ್ಯಕ್ಕೆ ಅಡ್ಡಿಯಾಯಿತು. ಕೊನೆಗೆ ಟಿಪ್ಪರ್ ಲಾರಿಗಳ ಹೆಡ್‌ಲೈಟ್ ಸಹಾಯದಿಂದ ಕಾರ್ಯಾಚರಣೆ ಮುಂದುವರಿಸಲಾಯಿತು. ಉತ್ತರ ಭಾರತದ ಮುಳುಗು ತಜ್ಞರು ಹರಸಾಹಸ ಪಟ್ಟು ಮಧ್ಯರಾತ್ರಿ ಸೃಜನ್ ಮೃತದೇಹವನ್ನು ಹೊರತೆಗೆದಿದ್ದಾರೆ.
ಮೃತ ಸೃಜನ್ ತಂದೆ ಶಿವರಾಮ್ ರಿಕ್ಷಾ ಚಾಲಕರಾಗಿದ್ದರೆ, ತಾಯಿ ಜಯಲಕ್ಷ್ಮಿ ಅಂಬ್ಲಮೊಗರು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ. ದಂಪತಿಗೆ ಸೃಜನ್ ಹಿರಿಯ ಮಗನಾಗಿದ್ದು, ಓರ್ವ ತಂಗಿ ಇದ್ದಾಳೆ. ತಾರುಣ್ಯದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



