ಕೆಆರ್‌ಎಸ್‌ಗೆ ಕೇಂದ್ರ ಸಂಸದರ ಜಲ ಸಂಪನ್ಮೂಲಗಳ ಸಂಸದೀಯ ಸ್ಥಾಯಿ ಸಮಿತಿ ತಂಡ ಭೇಟಿ

ಹೊಸ ದಿಗಂತ ವರದಿ,ಶ್ರೀರಂಗಪಟ್ಟಣ :

ಕೆಆರ್‌ಎಸ್ ಅಣೆಕಟ್ಟೆಗೆ ಕೇಂದ್ರ ಸಂಸದರ ಜಲ ಸಂಪನ್ಮೂಲಗಳ ಸಂಸದೀಯ ಸ್ಥಾಯಿ ಸಮಿತಿ ತಂಡ ಭೇಟಿ ನೀಡಿ ಜಲಾಶಯದ ಸ್ಥಿತಿಗತಿ ಅಧ್ಯಯನ, ಪರಿಶೀಲನೆ ನಡೆಸಿದರು.

ಕೇಂದ್ರ ತಂಡವನ್ನ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು, ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಸ್ವಾಗತಿಸಿದರು.

ಗುಜರಾತ್ ಸಂಸದ ಪರ್‌ಬಾತ್‌ಬಾಯಿ ಸವಾಬಾಯಿ ಪಟೇಲ್ ನೇತೃತ್ವದಲ್ಲಿ 17 ಜನ ಸಮಿತಿಯ ತಂಡದಲ್ಲಿ 14 ಜನರ ತಂಡ ಭೇಟಿ ನೀಡಿ ಕೆಆರ್‌ಎಸ್ ಅಣೆಕಟ್ಟೆ ವೀಕ್ಷಿಸಿದರು. ಇದೇ ವೇಳೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಡ್ಯಾಂಗಳ ಸ್ಥಿತಿಗತಿ, ಈ ಭಾಗದ ರೈತರ ಸಮಸ್ಯೆ, ಡ್ಯಾಂ ಮತ್ತು ಬೃಂದಾವನ ಗಾರ್ಡನ್ ಅಭಿವೃದ್ಧಿಗೆ ಬೇಕಿರುವ ಅಗತ್ಯ ಅನುದಾನ ಕೋರಿ ಪುಟ್ಟರಾಜು ವಿಶೇಷ ಮನವಿ ಸಲ್ಲಿಸಿದರು.

ನಂತರ ಪುಟ್ಟರಾಜು ಮಾತನಾಡಿ, ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಈ ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಳೇ ಮೈಸೂರು ಪ್ರಾಂಥ್ಯದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ವಸ್ತುಸ್ಥಿತಿ ಬಗ್ಗೆ ಸಮಿತಿ ಸದಸ್ಯರಿಗೆ ಮನದಟ್ಟು ಮಾಡಿಕೊಡುವಂತೆ ಶ್ರೀಕಂಠೇಗೌಡ ಹಾಗೂ ನನಗೆ ಸೂಚನೆ ನೀಡಿದ್ದರು ಅದರಂತೆ ಇಂದು ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಇಲ್ಲಿನ ನೀರಿನ ಸಮಸ್ಯೆಗಳ ಬಗ್ಗೆ ವಿವಿರವಾಗಿ ತಿಳಿಸಲಾಗಿದೆ ಎಂದರು.

ಮುಖ್ಯವಾಗಿ ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳಲು ತಾವು ಇಲ್ಲಿರುವ ವಸ್ತುಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮನದಟ್ಟು ಮಾಡಿಕೊಡುವ ಬಗ್ಗೆ ಸಹ ಅವರಿಗೆ ಮನವಿ ಮಾಡಿದ್ದೇವೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಈ ಹಿಂದಿನಿಂದಲೂ ಲೋಕಸಭಾ ಸದಸ್ಯರ ತಂಡವನ್ನು ಕಳುಹಿಸಿ ರಾಜ್ಯದ ನೀರಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುವಂತೆ ಮನವಿ ಮಾಡುತ್ತಿದ್ದ ಹಿನ್ನಲೆಯಲ್ಲಿ ಇಂದು ಜಲ ಸಂಪನ್ಮೂಲಗಳ ಸಂಸದೀಯ ಸ್ಥಾಯಿ ಸಮಿತಿ ತಂಡ ಭೇಟಿ ನೀಡಿದೆ. ಈ ತಂಡ ಕೇಂದ್ರದ ಗಮನ ಸೆಳೆದು ರಾಜ್ಯದ ನೀರಿನ ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಸಂಸದೀಯ ಸ್ಥಾಯಿ ಸಮಿತಿ ಭೇಟಿ ವೇಳೆ ಸ್ಥಳೀಯ ಸಂಸದೆ ಸುಮಲತಾ ಗೈರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here