ಕಾರು- ಖಾಸಗಿ ಬಸ್ಸಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ (ಗೋಳಿಯಂಗಡಿ) ಗ್ರಾಮದ ಮೊಗೇರಡ್ಕ ಎಂಬಲ್ಲಿ ಇನೋವಾ ಕಾರು ಮತ್ತು ಲೀಝಾ ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಡಿದ್ದಾರೆ.

ಮೃತರನ್ನು ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಮಂಗಳೂರು ತಾಲೂಕು ಗಂಜಿಮಠ ಬಲ್ಗುಲಿಪಾಡಿ “ದಾರುಲ್ ಕರಾಮ” ನಿವಾಸಿ ಸೂರಲ್ಪಾಡಿ ನೌಶಾದ್ ಹಾಜಿ(44) (ಅಬ್ದುಲ್ ಹಮೀದ್ ಎನ್.) ಮತ್ತು ಅವರ ವಾಹನ ಚಾಲಕ ಮಂಗಳೂರು ತಾಲೂಕು ಉಳಾಯಿಬೆಟ್ಟು ಸನಿಹದ ಆಚೆಬೆಟ್ಟು ನಿವಾಸಿ ಮುಹಮ್ಮದ್ ಮುಶ್ರಫ್(20) ಎಂಬವರೆಂದು ಗುರುತಿಸಲಾಗಿದೆ.

ಇನೋವ ಕಾರು, ಬಸ್ಸು ನಡುವೆ ಈ ಅವಘಡ ಸಂಭವಿಸಿದೆ. ನೌಶಾದ್ ಹಾಜಿ‌ ಅವರು ಇಂಜಿನಿಯರ್ ಕೂಡ ಆಗಿದ್ದು, ಬೆಳ್ತಂಗಡಿ ದಾರುಸ್ಸಲಾಂ ಸಂಸ್ಥೆ ಕೋಶಾಧಿಕಾರಿಯೂ ಆಗಿದ್ದರು.

ಅಗತ್ಯ ಕೆಲಸದ ನಿಮಿತ್ತ ಅವರು ಬೆಳ್ತಂಗಡಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತವಾದ ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದರು. ಆದರೆ ಅದಾಗಲೇ ಇಬ್ಬರೂ ಕೂಡ ಮೃತಪಟ್ಟಿದ್ದರು.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಮತ್ತು ಬಸ್ಸಿನ ಒಂದು ಪಾರ್ಶ್ವ ಬಹುತೇಕ ನುಜ್ಜುಗುಜ್ಜಾಗಿದೆ. ಬಸ್ಸಿನ ಎದುರಿಮನ ಚಕ್ರದ ಸೆಟ್ ಸಮೇತ ಕಿತ್ತು ಬಂದಿದ್ದು ಹಿಂದಿನ ಚಕ್ರದ ವರೆಗೆ ಬಂತು ನಿಂತಿತ್ತು.

ಮೂಲತಃ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿಯಾಗಿದ್ದ ನೌಶಾದ್ ಹಾಜಿ ಪ್ರಸಕ್ತ ಗಂಜಿಮಠದ ಸೂರಲ್ಪಾಡಿಯಲ್ಲಿ ನೆಲೆಸಿದ್ದರು. ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿದ್ದ ಅವರು “ನಂಡೆ ಪೆಂಜಳ್” ಅಭಿಯಾನದ ಸ್ಥಾಪಕಾಧ್ಯಕ್ಷರಾಗಿದ್ದರು. ಬೆಳ್ತಂಗಡಿಯ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಕೋಶಾಧಿಕಾರಿಯಾಗಿ, ಮೂಡುಬಿದಿರೆ ಕಾಶಿಪಟ್ಟದ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿಯಾಗಿ, ಗುರುಪುರ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಇಂದು ಬೆಳ್ತಂಗಡಿಯ ದಾರುಸ್ಸಲಾಂ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಿದ ಹಜ್ಜ್ ಟೂರ್ ಇದರ ಲಾಯಿಲದ ಕಚೇರಿ ಉದ್ಘಾಟನೆಗಾಗಿ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು ಕಳೆದ ರಾತ್ರಿಯೂ ಕೂಡ ಅಡ್ಕ ಬೈಕಂಪಾಡಿ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!