August 30, 2026
Sunday, August 30, 2026
spot_img

ರಕ್ತ ಸಂಬಂಧಕ್ಕೆ ಮುಳ್ಳಾದ ಹೂವಿನ ಗಿಡ: ಆಸ್ತಿ ದ್ವೇಷಕ್ಕೆ ತಮ್ಮನನ್ನೇ ಬಲಿಪಡೆದ ಅಣ್ಣ

ಹೊಸದಿಗಂತ ಬೆಳಗಾವಿ:

ರಕ್ತ ಸಂಬಂಧಗಳ ನಡುವೆ ಆಸ್ತಿ ಎಂಬ ವಿಷಬೀಜ ಎಂತಹ ಅನಾಹುತ ಸೃಷ್ಟಿಸುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿಗೆ ನೀರು ಹಾಯಿಸುವ ವಿಷಯದಲ್ಲಿ ಶುರುವಾದ ಸಣ್ಣ ಜಗಳ, ಅಣ್ಣನ ಕೈಯಿಂದಲೇ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ.

ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದ ನಿವಾಸಿ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾದ ದುರ್ದೈವಿ. ಇವರ ಅಣ್ಣ ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಇಬ್ಬರ ನಡುವೆ ಮೊದಲಿನಿಂದಲೂ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತು.

ಹೊಲದಲ್ಲಿ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ, ಅಣ್ಣ ಮಹಾದೇವಪ್ಪನ ಹೂವಿನ ಗಿಡಗಳು ಮುರಿದು ಬಿದ್ದಿದ್ದವು. “ನನ್ನ ಹೊಲದ ಗಿಡಗಳನ್ನು ನೀನೇ ಮುರಿದಿದ್ದೀಯಾ” ಎಂದು ಮಹಾದೇವಪ್ಪ ತನ್ನ ತಮ್ಮ ಯಲ್ಲಪ್ಪನ ಜೊತೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಮಹಾದೇವಪ್ಪ, ಕೈಯಲ್ಲಿದ್ದ ಸಲಿಕೆಯಿಂದ ತಮ್ಮನ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನ ಪತ್ನಿ ಲಕ್ಷ್ಮೀ ಯಲ್ಲಪ್ಪ ಸಣ್ಣಮ್ಮನವರ ನೀಡಿದ ದೂರಿನ ಮೇರೆಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಐ. ಎಂ. ಮಠಪತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !