ಹೊಸದಿಗಂತ ವರದಿ ಬೆಳಗಾವಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ನೀಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಮಹದೇವ ಪ್ರಕಾಶ್’ ದತ್ತಿ ಪ್ರಶಸ್ತಿಗೆ ‘ವಿಜಯ ಕರ್ನಾಟಕ’ ಬೆಳಗಾವಿ-ಬಾಗಲಕೋಟೆ ಆವೃತ್ತಿಯ ಸ್ಥಾನಿಕ ಸಂಪಾದಕ ಕೆ. ಸುರೇಶ್ ಅವರು ಆಯ್ಕೆಯಾಗಿದ್ದಾರೆ. ಅವರೂ ಸೇರಿದಂತೆ ರಾಜ್ಯದ ಒಟ್ಟು 28 ಮಾಧ್ಯಮ ಪ್ರತಿನಿಧಿಗಳಿಗೆ ವಿವಿಧ ವಿಭಾಗಗಳಲ್ಲಿ ನಾನಾ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಜುಲೈ 25ರಂದು ಪ್ರಶಸ್ತಿ ಪ್ರದಾನ
ಮಾಧ್ಯಮ ರಂಗದಲ್ಲಿ ಸಲ್ಲಿಸಿದ ಸುದೀರ್ಘ ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಹಾಗೂ ವಿಶೇಷ ಸಾಧನೆಗಳನ್ನು ಪರಿಗಣಿಸಿ ಅರ್ಹ ಪತ್ರಕರ್ತರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯ ಸ್ವರೂಪ: ₹5,000 ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನೊಳಗೊಂಡ ಪ್ರಶಸ್ತಿ ಫಲಕ.
ಕಾರ್ಯಕ್ರಮ: ಜುಲೈ 25 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ದಶಕಗಳ ಅನುಭವಿ ಪತ್ರಕರ್ತ ಕೆ. ಸುರೇಶ್
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಮೂಲದವರಾದ ಕೆ. ಸುರೇಶ್ ಅವರು ಪ್ರಸ್ತುತ ‘ವಿಜಯ ಕರ್ನಾಟಕ’ ಬೆಳಗಾವಿ ಆವೃತ್ತಿಯ ಜೊತೆಗೆ ಬಾಗಲಕೋಟೆ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲದ ಸುದೀರ್ಘ ಅನುಭವ ಹೊಂದಿರುವ ಇವರು, ಈ ಹಿಂದೆ ವಿಜಯವಾಣಿ, ಉದಯವಾಣಿ, ರೂಪತಾರಾ ಹಾಗೂ ಹೊಸದಿಗಂತ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅನುಪಮ ಪತ್ರಿಕಾ ಸೇವೆಯನ್ನು ಗುರುತಿಸಿ ಈ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.



