ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಸ್ಕೂಟಿಯ ಮೇಲೆ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಮರ ಬಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ -ಪಂಜ ರಸ್ತೆಯ ಕೋಡಿoಬಾಳ ಸಮೀಪ ಪುಳಿಕುಕ್ಕು ಎಂಬಲ್ಲಿ ನಡೆದಿದೆ.
ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡ ಅವರ ಪುತ್ರ, ಎಡಮಂಗಲ ಸಿ. ಎ. ಬ್ಯಾಂಕ್ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ (58) ಸಾವನ್ನಪ್ಪಿದ ದುರ್ದೈವಿ.
ಈ ಘಟನೆ (ನ. 2) ಶನಿವಾರ ಬೆಳಗ್ಗೆ ಸಂಭವಿಸಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮನೆಯಲ್ಲಿ ದೀಪಾವಳಿ ಪ್ರಯುಕ್ತ ಹರಕೆ ಇದ್ದುದರಿಂದ ಕೋಳಿ ತರುವುದಕ್ಕಾಗಿ ಕಡಬಕ್ಕೆ ಹೋಗಿದ್ದ ಅವರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಜನರ ಆಕ್ರೋಶ
ರಸ್ತೆಯ ಪಕ್ಕದಲ್ಲಿನ ದೂಪದ ಮರಗಳಿಂದ ಮೇಣ (ಹಾಲು ಮಡ್ಡಿ ) ಸಂಗ್ರಹಿಸಿ ಬುಡದಲ್ಲಿ ಶಿಥಿಲಗೊಂಡ ಮರಗಳನ್ನು ಹಾಗೆಯೇ ಬಿಡುತ್ತಿರುವುದರಿಂದ ಪದೇ ಪದೇ ಕಡಬ, ನೆಟ್ಟಣ ಭಾಗದಲ್ಲಿ ಮರಗಳು ರಸ್ತೆಗೆ ಮುರಿದು ಬಿದ್ದು ಅಪಾಯ ಸಂಭವಿಸುತ್ತಲೇ ಇರುವ ಬಗ್ಗೆ ಮಾಧ್ಯಮಗಳು ಹಲವು ಬಾರಿ ಎಚ್ಚರಿಸಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೇ ಇರುವುದೇ ದುರಂತಕ್ಕೆ ಕಾರಣ ಎಂದು ಸುರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಅಗ್ರಹಿಸಿ ಸಾರ್ವಜನಿಕರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ.