ಪಿಹೆಚ್‌ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ವಿದೇಶಕ್ಕೆ ಹಾರಿದಳೇ ಯುವತಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಿಹೆಚ್‌ಡಿ ವಿದ್ಯಾರ್ಥಿನಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನಿವಾಸಿ 27ರ ಹರೆಯದ ಯುವತಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈಕೆ ವಿದೇಶಕ್ಕೆ ತರಳಿರುವ ಶಂಕೆ ವ್ಯಕ್ತವಾಗಿದೆ.

ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಪಿಹೆಚ್‌ಡಿ ಅಧ್ಯಯನ ಮಾಡುತ್ತಿದ್ದ ಚೈತ್ರಾ ಫೆ.17ರಂದು ತನ್ನ ಸ್ಕೂಟರ್‌ನೊಂದಿಗೆ ತೆರಳಿದಾಕೆ ವಾಪಸಾಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಫೆ.18ರಂದು ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ಈ ಬಗ್ಗೆ ದೂರನ್ನೂ ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯೋರ್ವನ ಜೊತೆ ಬೆಂಗಳೂರಿಗೆ ತೆರಳಿದ್ದು, ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾಳೆ. ಬಳಿಕ ದೆಹಲಿಗೆ ವಾಪಸ್ಸಾಗಿ ಅಲ್ಲಿಂದ ವಿದೇಶಕ್ಕೆ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಈಕೆಯ ಜೊತೆಗೆ ತೆರಳಿರುವ ಯುವಕನನ್ನು ಪತ್ತೆಹಚ್ಚಿರುವ ಪೊಲೀಸರು ಆತನನ್ನು ವಿಚಾರಣೆಗಾಗಿ ಉಳ್ಳಾಲ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ. ಆದರೆ ವಿಚಾರಣೆ ವೇಳೆ ಆತ ಚೈತ್ರಾ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ.

ಈ ನಡುವೆ ಚೈತ್ರಾಳಿಗೆ ವಿದೇಶದ ವೀಸಾ ಕಳುಹಿಸಿದವರು ಯಾರು? ವೀಸಾ ಕಳುಹಿಸಿದ ವ್ಯಕ್ತಿಗೂ ಚೈತ್ರಾಳಿಗೂ ಇರುವ ನಂಟೇನು ಎಂಬುದು ಇನ್ನೂ ನಿಗೂಢವಾಗಿದ್ದು, ಒಟ್ಟಿನಲ್ಲಿ ಈ ಪ್ರಕರಣ ಗೊಂದಲದ ಗೂಡಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!