ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜು ನಿಗತೆ
ಅರಳೇಶ್ವರ: “ಜೋಕುಮಾರ ಹುಟ್ಟಲಿ ಲೋಕವೆಲ್ಲ ಬೆಳೆಯಲಿ ಆ ತಾಯಿ ಹಾಲು ಕರೆಯಲಿ ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ” ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡುವ ಪದಗಳನ್ನು ಕೇಳುವುದೇ ಚಂದ.
“ಅಡ್ಡಡ್ಡ ಮಳಿ ಬಂದ ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೋಕ್ಯಾನೆ ಜೋಕುಮಾರ, ಮುಡಿ ತುಂಬಾ ಹೂವು ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ”
ಜನಪದ ವಿಶಿಷ್ಟ ಆಚರಣೆ
ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುಗಳನ್ನು ಹಾಡುವ ಬಾರಿಕೇರ ಸಮುದಾಯದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿ ಆತನ ಬಾಯಿಯಲ್ಲಿ ಬೆಣ್ಣೆ ಇಟ್ಟು ಮನೆಗಳಿಗೆ ಹೊತ್ತೊಯ್ಯುವ ಜೋಗಪ್ಪನ ಹಬ್ಬದ ಆಚರಣೆ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಕಂಡು ಬರುತ್ತಿದೆ.
ಅರಳೇಶ್ವರ ಗ್ರಾಮದ ಬಾರಕೇರ ಅಂದರೆ ಗಂಗಾಮತಸ್ಥರ ಮನೆಯಲ್ಲಿ ವಿಘ್ನ ನಿವಾರಕ ಗಣೇಶ ವಿಸರ್ಜನೆಯ ನಂತರ ಜನಿಸಿರುವ ಜೋಕುಮಾರ ಸ್ವಾಮಿಯನ್ನು ಹನ್ನೊಂದು ದಿನ ಏಳು ಗ್ರಾಮಗಳಲ್ಲಿ ಗಂಗಾಮತ ಸಮುದಾಯದ ಬಾರಿಕೇರ ನೀಲಮ್ಮ, ಕಮಲಾ, ಕಮಲಮ್ಮ, ಯಲ್ಲಪ್ಪ ಅವರು ಜೋಕುಮಾರ ಸ್ವಾಮಿಯನ್ನು ಮೆರೆಸುತ್ತಾರೆ. ಎಣ್ಣೆ ಮತ್ತು ಹುತ್ತಿನ ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಹೊಸ ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ ಸಜ್ಜೆ ಜೋಳ ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸುತ್ತಾರೆ.
ಹೀಗೆ ಬುಟ್ಟಿಯಲ್ಲಿ ಹೊತ್ತೊಯ್ಯುವ ಜೋಕುಮಾರನಿಗೆ ಮನೆ ಮಂದಿ ಅಡಿಕೆ ಎಲೆ, ಅಕ್ಕಿ, ಜೋಳ ಇತ್ಯಾದಿ ಕಾಳುಕಡಿ, ಎಣ್ಣೆ ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥ ಕೊಡುವರು.
ಜೋಕುಮಾರನ ವಿಸರ್ಜನೆ
ಸೆ.29ರಂದು (ಜೋಕುಮಾರನ ಹುಣ್ಣಿಮೆ) ರಾತ್ರಿ ಅಗಸರ ಮನೆಗೆ ತೆರಳಿ ಬಿಳಿ ಬಟ್ಟೆ ಪಡೆದು ಜೋಕುಮಾರನ ಮೂರ್ತಿಗೆ ಸುತ್ತಿದ ನಂತರ ಗ್ರಾಮದ ಬಾರಿಕೇರ ಸಮಾಜದವರು ಸ್ಮಶಾನದಲ್ಲಿ ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸುತ್ತಾರೆ. ತಾವು ಹನ್ನೊಂದು ದಿನ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧವಸ ಧಾನ್ಯಗಳಿಂದ ಅಡುಗೆ ಮಾಡಿ ಜೋಕುಮಾರಸ್ವಾಮಿಗೆ ನೈವೇದ್ಯ ಅರ್ಪಿಸಿದ ನಂತರ ಸಾಮೂಹಿಕ ಭೋಜನ ಮಾಡುತ್ತಾರೆ.
ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಿದ್ದಂತೆ ಊರಿನವರೆಲ್ಲ ಸೇರಿ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಜೋಕುಮಾರನ ಪೂಜೆ ಆಚರಣೆಗೆ ಬಂದಿದೆ ಎಂದು ಮಹಿಳೆಯರು ಜೋಕುಮಾರನ ಕಥೆ ವಿವರಿಸುತ್ತಾರೆ.