ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೌತಮ್ ಅದಾನಿ ಸೇರಿದಂತೆ ಎಂಟು ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪಗಳು ದಾಖಲಾಗಿವೆ. ಅಮೆರಿಕದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಎಸ್ಇಸಿ ನ್ಯೂಯಾರ್ಕ್ನ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಸಿರಿಲ್ ಕೆಬನೆಸ್ ವಿರುದ್ಧ ಸಿವಿಲ್ ಚಾರ್ಜ್ ಹಾಕಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿರುವುದು ರಾಯ್ಟರ್ಸ್ ಸುದ್ದಿಸಂಸ್ಥೆಯ ವರದಿಯಿಂದ ತಿಳಿದುಬಂದಿದೆ.
ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಪ್ರಮುಖವಾಗಿ ಕೇಳಿಬಂದಿದೆ. ಕೆನಡಾದ ಪೆನ್ಷನ್ ಫಂಡ್ ಆದ ಸಿಡಿಪಿಕ್ಯೂನ ಮಾಜಿ ಎಂಡಿ, ಹಾಗು ಅಜುರೆ ಪವರ್ ಸಂಸ್ಥೆಯ ಮಾಜಿ ಎಕ್ಸಿಕ್ಯೂಟಿವ್ ಆದ ಸೈರಿಲ್ ಕೆಬನೆಸ್ ಅವರೂ ಆರೋಪಿತರಲ್ಲಿ ಸೇರಿದ್ದಾರೆ. ಗೌತಮ್ ಅದಾನಿ, ಸೈರಿಲ್ ಕೆಬನೆಸ್ ಅವರಲ್ಲದೆ, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿ ತಳುಕುಹಾಕಿಕೊಂಡಿರುವ ಇತರ ವ್ಯಕ್ತಿಗಳು.
ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ಗೂ ಅಧಿಕ ಮೊತ್ತದಷ್ಟು ಲಂಚ ನೀಡಲಾಗಿದೆ ಎಂಬುದು ಆರೋಪ. 2020-24ರ ಅವಧಿಯಲ್ಲಿ ಲಂಚಗಳನ್ನು ನೀಡಿದ ಅಥವಾ ನೀಡಲು ಯೋಜಿಸಿದ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.
ಅಮೆರಿಕಲ್ಲಿ ಕೋರ್ಟ್ನಲ್ಲಿ ಗೌತಮ್ ಅದಾನಿ ಮತ್ತಿತರರ ವಿರುದ್ಧ ಆರೋಪಗಳು ದಾಖಲಾದ ಬೆನ್ನಲ್ಲೇ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ತನ್ನ 600 ಮಿಲಿಯನ್ ಯುಎಸ್ ಡಾಲರ್ ಬಾಂಡ್ಗಳ ವಿತರಣೆಯ ಯೋಜನೆಯನ್ನು ಕೈಬಿಟ್ಟಿದೆ. ಈ ಬಾಂಡ್ಗಳಿಗೆ ಸಾಕಷ್ಟು ಹೂಡಿಕೆದಾರರು ಅರ್ಜಿ ಹಾಕಿದ್ದರು. ಕೋರ್ಟ್ನಲ್ಲಿ ಪ್ರಕರಣ ಬರುತ್ತಲ್ಲೇ ಸಂಸ್ಥೆ ತನ್ನ ನಡೆಯನ್ನು ಹಿಂಪಡೆದುಕೊಂಡಿದೆ.