ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗಡಿಭಾಗ ತಮಿಳುನಾಡಿನ ಸಾನ ಮಾವು ಬಳಿ ಅಂಬಾರಿ ಹೊತ್ತಿದ್ದ ಆನೆ ಇದ್ದ ವಾಹನ ಅಪಘಾತಕ್ಕೀಡಾಗಿದ್ದು, ವಾಹನ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆನೆ ಪ್ರಾಣಾಪಾಯದಿಂದ ಪಾರಾಗಿದೆ.
ಮೊನ್ನೆ ತಿರುಚಿಯಿಂದ ಬನ್ನೇರುಘಟ್ಟಗೆ ಆನೆಯನ್ನು ಕರೆತರಲಾಗಿತ್ತು. ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಅಂಬಾರಿಯನ್ನು ಹೊತ್ತಿದ್ದ ಆನೆ ಇದಾಗಿದ್ದು, ಮತ್ತೆ ತಿರುಚಿಗೆ ವಾಪಸ್ ಹೊರಡಲಾಗಿತ್ತು.
ಮಾರ್ಗ ಮಧ್ಯೆ ಸಾನ ಮಾವು ಸಮೀಪ ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಚಾಲಕ ಹೋಗಿದ್ದ. ಈ ವೇಳೆ ವಾಹನ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದ ಒಳಗೆ ನುಗ್ಗಿದೆ. ಈ ಸಮಯದಲ್ಲಿ ವಾಹನವನ್ನು ಹತೋಟಿಗೆ ತರಲು ಚಾಲಕ ಪ್ರಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ವಾಹನಕ್ಕೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹೊಸೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.