ಹಣ ದ್ವಿಗುಣಗೊಳಿಸುವ ಹೋಗಿ 21 ಲಕ್ಷ ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಮಹಿಳೆಯೋರ್ವರು ಹಾರಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ವೀಟಾ ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಈ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದ್ದರು. ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ.

ಆರ್ಥಿಕ ಸಂಕಷ್ಟ:
ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ವೀಟಾ ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು.
ಹಣ ದ್ವಿಗುಣಗೊಳಿಸುವ ಆ್ಯಪ್ ನಲ್ಲಿ ₹ 21 ಲಕ್ಷ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದರು. ಮಕ್ಕಳು ಇಲ್ಲ ಎಂಬ ಕೊರಗಿನ ಜೊತೆಗೆ ಆರ್ಥಿಕ ಸಂಕಷ್ಟದಿಂದ ಇವರು ಕೈಗೊಂಡ ಆತ್ಮಹತ್ಯೆಯ ನಿರ್ಧಾರದಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಭಾರತಿ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!